ಭಾರತ
ದಕ್ಷಿಣ ಏಷ್ಯದ ಒಂದು ಗಣರಾಜ್ಯ. ವಿಸ್ತಾರದಲ್ಲಿ ಪ್ರಪಂಚದ ಏಳನೆಯ ದೇಶ. ಜನಸಂಖ್ಯೆಯಲ್ಲಿ ಎರಡನೆಯದಾದರೂ ಅತ್ಯಂತ ಜನನಿಬಿಡ ದೇಶವಿದು. ವಿಸ್ತೀರ್ಣ 12,61,810 ಚಕಿಮೀ. ಜನಸಂಖ್ಯೆ 68,38,10,051 (1981). ರಾಜಧಾನಿ ನವದೆಹಲಿ.

ಭಾರತ ಸಮಭಾಜಕ ವೃತ್ತದ ಉತ್ತರ ಅಕ್ಷಾಂಶ 804'-3706' ಮತ್ತು ಪೂರ್ವ ರೇಖಾಂಶ 6807-970 25' ನಡುವೆ ಇದೆ. ಆಯಕಟ್ಟಿನ ದೃಷ್ಟಿಯಿಂದ ಭಾರತದ್ದು ಅತ್ಯಂತ ಮಹತ್ತ್ವದ ಸನ್ನಿವೇಶ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಾಚೆ ಪಶ್ಚಿಮ ಏಷ್ಯ ಪ್ರದೇಶ ಹಾಗೂ ಆಫ್ರಿಕ; ಪೂರ್ವದಲ್ಲಿ ಬರ್ಮ, ಮಲೇಷಿಯ, ಇಂಡೊನೇಷ್ಯ. ದಕ್ಷಿಣದಲ್ಲಿ ವಿಶಾಲವಾಗಿ ಹಬ್ಬಿದ ಹಿಂದೂಸಾಗರ ಉತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಗಳಿಂದಾಚೆ ಚೀನ. ಭೌಗೋಳಿಕವಾಗಿ ಹಿಮಾಲಯ ಶ್ರೇಣಿಗಳು ಎತ್ತರದ ಕೋಟೆ ಗೋಡೆಗಳಂತಿದ್ದರೂ ಇವುಗಳ ದಕ್ಷಿಣದ-ಉತ್ತರ ಭಾರತದ ಸಿಂಧೂ-ಗಂಗಾನದಿಗಳ ಫಲವತ್ತಾದ ಬಯಲು ಇತಿಹಾಸದ ಉದ್ದಕ್ಕೂ ಹಲವು ವೇಳೆ ಆಕ್ರಮಣಕಾರರನ್ನು ಆಕರ್ಷಿಸಿದ್ದು ಅಕ್ಕಪಕ್ಕಗಳಲ್ಲಿ ಹಬ್ಬಿದ ಕಡಲುಗಳೂ ಅನ್ಯದೇಶಿಯರನ್ನು ತಡೆಯಲು ಅಸಮರ್ಥವಾಗಿ ಪರಿಣಮಿಸಿದ್ದುವು. ಆದರೆ ಪ್ರಪಂಚದ ಇತಿಹಾಸ ಮಹಾಪ್ರವಾಹದಲ್ಲಿ ಭಾರತವೂ ಒಂದಾಗಲು ಇವು ನೆರವು ನೀಡಿವೆ. ಪ್ರಪಂಚದ ಉಳಿದ ಭಾಗದಿಂದ ಭಾರತ ಪ್ರಭಾವಿವಾಗಿರುವಂತೆಯೇ ಭಾರತವೂ ಪ್ರಪಂಚದ ಉಳಿದ ಭಾಗದ ಮೇಲೆ ತನ್ನ ಮುದ್ರೆ ಒತ್ತಿದೆ.

ಭಾರತದ ಉತ್ತರದಲ್ಲಿ ಚೀನೀ ಟಿಬೆಟ್, ನೇಪಾಳ, ಭೂತಾನ, ಚೀನೀ ಸಿಂಕಿಯಾಂಗ್ ಉಯಿಫರ್ ಇವೆ. ವಾಯವ್ಯದಲ್ಲಿ ಪಾಕಿಸ್ತಾನ ಪೂರ್ವದಲ್ಲಿ, ಬರ್ಮ ದೇಶ, ಬಾಂಗ್ಲಾ ದೇಶವನ್ನು ಭಾರತ ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ಸುತ್ತುವರಿದಿದೆ. ಕರ್ಕಾಟಕ ಸಂಕ್ರಾತಿ ವೃತ್ತದಿಂದ ದಕ್ಷಿಣಕ್ಕೆ ಸಾಗಿದಂತೆ ಭಾರತದ ಭೂ ಪ್ರದೇಶ ಕಿರಿದಾಗುತ್ತಾ ಹೋಗಿ ಕನ್ಯಾಕುಮಾರಿಯಲ್ಲಿ ಕೊನೆಯಾಗುತ್ತದೆ. ಈ ವೃತ್ತದ ಪೂರ್ವಕ್ಕೆ ಬಂಗಾಳಕೊಲ್ಲಿ ಹಾಗೂ ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಇವೆ. ಕನ್ಯಾಕುಮಾರಿಯಿಂದ ದಕ್ಷಿಣಕ್ಕೆ ಇರುವುದು ಹಿಂದೂಸಾಗರ. ದಕ್ಷಿಣದ ಶ್ರೀಲಂಕಾ ಮತ್ತು ಭಾರತದ ನಡುವೆ ಮನ್ನಾರ್ ಖಾರಿ ಹಾಗೂ ಪಾಕ್ ಜಲಸಂಧಿ ಇವೆ. ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳೂ ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪ, ಮಿನಿಕಾಯ್ ಮತ್ತು ಅಮಿನ್‍ದಿವಿ ದ್ವೀಪಗಳೂ ಭಾರತಕ್ಕೇ ಸೇರಿದವು.

ಭೌತಿಕ ಭೂವಿವರಣೆ: ಮೇಲ್ಮೈಲಕ್ಷಣ. ದಕ್ಷಿಣೋತ್ತರವಾಗಿ 3,214 ಕಿಮೀ ಹಾಗೂ ಪೂರ್ವ-ಪಶ್ಚಿಮವಾಗಿ 2,933 ಕಿಮೀ ಹಬ್ಬಿರುವ ಭಾರತದ ಭೂಗಡಿಯ ಉದ್ದ 15,200 ಕಿಮೀ ಇದರ ಕರಾವಳಿಯ ಉದ್ದ 6,083 ಕಿಮೀ, ಭಾರತ ಒಂದು ಉಪಖಂಡವೆಂಬ ಮಟ್ಟಿಗೆ ಭೌತಿಕ ವಿಭಿನ್ನತೆಗಳಿಂದ ಕೂಡಿರುವ ದೇಶ. ಇದು ಸ್ಥೂಲವಾಗಿ ಮೂರು ವಿಶಾಲವಾದ ಹಾಗೂ ಖಚಿತ ಲಕ್ಷಣಗಳನ್ನೊಳಗೊಂಡ ಪ್ರದೇಶಗಳಿಂದ ಕೂಡಿದೆ. ಮೊದಲನೆಯದು ಹಿಮಾಲಯ ಹಾಗೂ ಅದಕ್ಕೆ ಸೇರಿದ ಇತರ ಪರ್ವತ ಶ್ರೇಣಿಗಳ ಪ್ರದೇಶ. ಇದು ಉತ್ತರ ಭಾರತದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬಾಲಚಂದ್ರನಂತೆ ಹಬ್ಬಿದೆ. ಎರಡನೆಯದು ಸಿಂಧೂ-ಗಂಗಾ ಬಯಲು. ಭಾರತದ ಮೂರು ಮುಖ್ಯ ನದೀ ವ್ಯವಸ್ಥೆಗಳಾದ ಸಿಂಧೂ ಗಂಗಾ ಮತ್ತು ಬ್ರಹ್ಮಪುತ್ರ ಇವನ್ನು ರೂಪಿಸಿವೆ. ಇದರ ಉದ್ದ ಸುಮಾರು 2,400 ಕಿಮೀ ಅಗಲ 240 ಕಿಮೀಯಿಂದ 320ಕಿಮೀ ವರೆಗೆ ವ್ಯತ್ಯಾಸವಾಗುತ್ತದೆ. ದಕ್ಷಿಣದ ಪರ್ಯಾಯದ್ವೀಪದ ಪ್ರದೇಶ ಮೂರನೆಯದು. ದಖನ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಈ ಪ್ರದೇಶವನ್ನು ಉತ್ತರದ ಸಿಂಧೂ ಗಂಗಾ ಬಯಲಿನಿಂದ ಹಲವಾರು ಗಿರಿ-ಪರ್ವತಗಳ ಗುಚ್ಚ ಪ್ರತ್ಯೇಕಿಸುತ್ತದೆ. ಇವುಗಳ ಎತ್ತರ 460 ಮೀ ನಿಂದ 1,220 ಮೀ ವರೆಗೆ ವ್ಯತ್ಯಾಸವಾಗುತ್ತದೆ.

ಹಿಮಾಲಯ: ಇದು ಭೂಮಿಯ ಅತ್ಯುನ್ನತ ಪರ್ವತವ್ಯವಸ್ಥೆ, ಭೂಮಿಯ ಬಹುತೇಕ ಅತ್ಯುನ್ನತ ಶಿಖರಗಳು ಇರುವುದು ಇಲ್ಲೇ. ಇವುಗಳ ಪೈಕಿ ಸುಮಾರು ಹತ್ತು ಶಿಖರಗಳು 7,620 ಮೀಗಿಂತ ಎತ್ತರವಾಗಿವೆ. ಎವರೆಸ್ಟ್ ಭೂಮಿಯ ಅತ್ಯುನ್ನತ ಶಿಖರ (8,848 ಮೀ). ಹಿಮಾಲಯ ಭೂಮಿಯ ಅತ್ಯಂತ ಹಿರಿಯ ಹಾಗೂ ಪೂರ್ವ-ಪಶ್ಚಿಮವಾಗಿ ಹಬ್ಬಿದ ಅತ್ಯಂತ ಉದ್ದವಾದ ಪರ್ವತ ವ್ಯವಸ್ಥೆ.

ಹಿಮಾಲಯ ಶ್ರೇಣಿಗಳು ವೈವಿಧ್ಯಮಯ ಬೃಹತ್ ಕಣಿವೆಗಳಲ್ಲಿ ಹರಿಯುವ ನೀರ್ಗಲ್ಲ ನದಿಗಳ ತಲೆಗಳ ಮೇಲೆ ಹಿಮಾಚ್ಛಾದಿತ ಶಿಖರಗಳು, ಹಬ್ಬಿದ ಹಿಮಕ್ಷೇತ್ರಗಳು, ಆಳವಾದ ಕಂದರಗಳೊಳಕ್ಕೆ ದುಮ್ಮಿಕ್ಕುವ ಜಲಪಾತಗಳು, ನೆಲವನ್ನು ಕೊರೆದು ಹರಿಯುವ ಝರಿಗಳು. ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಇಂಥ ದೃಶ್ಯಗಳು ಸಾಮಾನ್ಯ. ಉತ್ತರ ಪ್ರದೇಶದಲ್ಲೂ ಪಶ್ಚಿಮ ಬಂಗಾಲದ ಉತ್ತರದಲ್ಲೂ ಅಸ್ಸಾಮಿನಲ್ಲೂ ಇವನ್ನು ಕಾಣಬಹುದು. ಹಿಮಾಚಲ ಪ್ರದೇಶದ ಕುಲು ಮತ್ತು  ಕಾಂಗ್ದಾ ಕಣಿವೆಗಳೂ ಉತ್ತರ ಪ್ರದೇಶದ ನಂದಾದೇವಿ ಗಿರಿಗುಚ್ಛವೂ ವಿಹಾರಧಾಮಗಳು.

ಉತ್ತರ ದಕ್ಷಿಣ ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ಹಿಮಾಲಯದಲ್ಲಿರುಷ್ಟು ವಿಶಾಲವಾದ ಹಿಮಾಮೃತ ಹಾಗೂ ಹಿಮನದಿಗಳಿಂದ ಕೂಡಿದ ಪ್ರದೇಶವಿಲ್ಲ. ಭೂಮಿಯ ಅತ್ಯಂತ ದೊಡ್ಡ ನೀರ್ಗಲ್ಲನದಿಗಳು ಹಿಮಾಲಯ ಪರ್ವತ ಪ್ರದೇಶದಲ್ಲಿವೆ. ಹಿಮಾಲಯದ ಅತ್ಯಂತ ಉನ್ನತ ಶ್ರೇಣಿಗಳು ಮಹಾ ಹಿಮಾಲಯ ಮತ್ತು ಕಾರಕೋರಮ್. ಇಲ್ಲಿರುವಷ್ಟು ಬೃಹತ್ ಹಿಮನದಿಗಳು ಬೇರೆಲ್ಲೂ ಇಲ್ಲ.

ಬಯಲುಗಳು: ಭಾರತದ ಸುಮಾರು 11.35 ಲಕ್ಷ ಚಕಿಮೀ ಪ್ರದೇಶವನ್ನು ಬಯಲುಗಳು ಆವರಿಸಿವೆ. ಉತ್ತರದ ಸಿಂಧೂ-ಗಂಗಾ ಬಯಲು ಅತ್ಯಂತ ದೊಡ್ಡದು. ದಕ್ಷಿಣದಲ್ಲೂ ಬಯಲುಗಳಿವೆ. ಪಶ್ಚಿಮ ಬಂಗಾಲ, ಬಿಹಾರ, ಉತ್ತರಪ್ರದೇಶ, ಹರಿಯಾಣ ಮತ್ತು ಪಂಜಾಬಿನ ಬಹುತೇಕ ಭಾಗ ಮೆಕ್ಕಲು ಮೈದಾನ, ಅಸ್ಸಾಮ್, ರಾಜಸ್ಥಾನಗಳಲ್ಲೂ ಮೈದಾನಗಳಿವೆ, ಭಾರತದ ದಕ್ಷಿಣ ನದಿಗಳ ಮುಖಜಭೂಮಿಗಳೂ ಸೇರಿದಂತೆ ದಕ್ಷಿಣ ಭಾರತದ ಪೂರ್ವ-ಪಶ್ಚಿಮ ಕರಾವಳಿಗಳು ಫಲವತ್ತಾದ ಬಯಲುಗಳು.
ಪ್ರಸ್ಥಭೂಮಿಗಳು: ಪರ್ಯಾಯ ದ್ವೀಪೀಯ ಭಾರತದ ಪ್ರಸ್ಥಭೂಮಿ ಅತ್ಯಂತ ಹಳೆಯ ಭೂಪ್ರದೇಶ. ಇದರ ಬಹುಭಾಗ ಪ್ರಾಚೀನ ಹರಳು ಬಂಡೆಗಳಿಂದ ಕೂಡಿದೆ. ಇವು 30ರಿಂದ 50 ಕೋಟಿ ವರ್ಷಗಳಷ್ಟು ಹಳೆಯವು. ದಖನ್ ಪ್ರಸ್ಥಭೂಮಿಯ ಉತ್ತರದ ಅಂಚಿನಲ್ಲಿ  ವಿಂಧ್ಯ ಪರ್ವತಗಳಿವೆ. ಇವು ದಕ್ಷಿಣಭಾರತವನ್ನು ಸಿಂಧೂ-ಗಂಗಾ ಬಯಲಿನಿಂದ ಪ್ರತ್ಯೇಕಿಸುತ್ತವೆ. ಇಲ್ಲಿಯ ಇತರ ಗಿರಿ ಶ್ರೇಣಿಗಳು ಆರಾವಳಿ, ಸಾತ್ಪುರ, ಮೈಕಲ್ ಮತ್ತು ಅಜಂತಾ. ದಖನ್ ಪ್ರಸ್ಥಭೂಮಿಯ ಪೂರ್ವಕ್ಕೆ ಪೂರ್ವ ಘಟ್ಟಗಳು ಹಬ್ಬಿವೆ. ಇವುಗಳ ಸರಾಸರಿ ಎತ್ತರ ಸುಮಾರು 610ಮೀ. ಪಶ್ಚಿಮದಲ್ಲಿ, ಕರಾವಳಿಗೆ ತೀರ ಹತ್ತಿರದಲ್ಲಿ ಹಬ್ಬಿರುವುವು ಪಶ್ಚಿಮ ಘಟ್ಟಗಳು. ಇವಕ್ಕೂ ಅರಬ್ಬೀ ಸಮುದ್ರಕ್ಕೂ ನಡುವೆ ಕಿರಿದಾದ ಮೈದಾನವಿದೆ. ಪೂರ್ವಕರಾವಳಿ ಹೆಚ್ಚು ಅಗಲವಾಗಿದೆ. ಪ್ರಸ್ಥ ಭೂಮಿಯ ದಕ್ಷಿಣಾಗ್ರದಲ್ಲಿರುವ ನೀಲಗಿರಿ ಬೆಟ್ಟಗಳಲ್ಲಿ ಪೂರ್ವ-ಪಶ್ಚಿಮ ಘಟ್ಟಗಳೆರಡೂ ಸಂಧಿಸುತ್ತವೆ.
ಭಾರತದ ಇತರ ಎಡೆಗಳಲ್ಲೂ ಪ್ರಸ್ಥಭೂಮಿಗಳುಂಟು, ಲಡಾಖ್ ಪ್ರಸ್ಥಭೂಮಿ ಇವುಗಳಲ್ಲೊಂದು ಕಾಶ್ಮೀರದಲ್ಲಿ ಹಿಮಾಲಯದ ಈಶಾನ್ಯಭಾಗದಲ್ಲಿರುವ ಈ ಪ್ರಸ್ಥಭೂಮಿ ದಿಣ್ಣೆಯ ಸರಾಸರಿ ಎತ್ತರ ಸುಮಾರು 5300 ಮೀ. ಇದು ಭಾರತದಲ್ಲೇ ಅತ್ಯುನ್ನತ ಪ್ರಸ್ಥಭೂಮಿ. ಬಲು ಕಡಿದೂ ದುರ್ಗಮವೂ ಆಗಿದೆ. ಮರಗಳಿಲ್ಲದ ಎತ್ತರ ದಿಣ್ಣೆಯ ಹುಲ್ಲುಗಾವಲಿನ ಎಲ್ಲ ಲಕ್ಷಣಗಳೂ ಇದಕ್ಕುಂಟು. ಲಡಾಖನ್ನು ಎರಡು ಭಾಗಗಳಾಗಿ ಸೀಳುವಂತೆ ಹಬ್ಬಿರುವ ಪರ್ವತ ಶ್ರೇಣಿ ಚಾಂಗ್ ಚಿನ್ಮೊ. ಇದು ಪಶ್ಚಿಮದಿಂದ ಪೂರ್ವಕ್ಕೆ ಹಬ್ಬಿದೆ. ಇದರ ಉತ್ತರಕ್ಕೆ ಒಳಮುಖವಾಗಿ ಇಳಿಜಾರಾಗಿರುವ ಬೋಗುಣಿಯಿದೆ. ಇಲ್ಲಿ ಕೆಲವು ಉಪ್ಪು ನೀರಿನ ಸರೋವರಗಳುಂಟು. ಚಾಂಗ್ ಚೆನ್ಮೊ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಹರಿಯುವ ನದಿಯ ಹೆಸರು ಅದೇ (ಚಾಂಗ್ ಚೆನ್ಮೊ).

ಜಲಸಂಪತ್ತು: ಭಾರತದ ಅಂತರ್ಜಲ ಹಾಗೂ ಮೇಲ್ಮೈಜಲ ಸಂಪತ್ತು ಅಗಾಧವಾದ್ದು. ಇಲ್ಲಿ ಕನಿಷ್ಠ ಮೂರು ಅಂತರ್ಜಲ ಬೋಗುಣಿಗಳಿವೆ. ಗಂಗಾ ಬಯಲಿನಡಿಯದು ಅತ್ಯಂತ ವಿಸ್ತಾರವಾದ್ದು. ಪಂಜಾಬಿನ ಮೆಕ್ಕಲುಮಣ್ಣಿನ ನೆಲದ ಅಡಿಯ ಬೋಗುಣಿ ಲೂಧಿಯಾನದಿಂದ ಅಮೃತಸರದ ವರೆಗೆ ಹಬ್ಬಿದೆ. ರಾಜಸ್ಥಾನದ ಒಂದು ಭಾಗದಲ್ಲೂ ಗುಜರಾತಿನ ಅಹಮದಾಬಾದಿನ ವರೆಗೂ ಹಬ್ಬಿರುವುದು ಮತ್ತೊಂದು. ಆದರೆ ನೆಲ ಇಲ್ಲೆಲ್ಲ ಹೆಚ್ಚು ಕಡಿಮೆ ಮಟ್ಟಸವಾಗಿರುವುದರಿಂದ ನೀರಿನ ಹರಿವು ಕಡಿಮೆ. ಭಾರತದ ನೆಲದಡಿಯ ಸಂರಚನೆ ಸಾಮಾನ್ಯವಾಗಿ ಮುಂಗಾರು-ಹಿಂಗಾರುಗಳಲ್ಲಿ ಬೀಳುವ ಮಳೆಯ ನೀರಿನ ಬಹು ಭಾಗವನ್ನು ಹಿಡಿದಿಡಲಾರದಂಥದು.

ಹಿಮಾಲಯ ತಪ್ಪಲು ಬೆಟ್ಟಗಳ ಸರಂಧ್ರ ಮರಳುಗಲ್ಲುಗಳು ಬುಗ್ಗೆಯ ನೀರಿನ ಹರಿವಿಗೆ ಅನುಕೂಲಕರ. ಸಾತ್ಪುರಾ ಪರ್ವತಶ್ರೇಣಿಯ ಉತ್ತರಕ್ಕಿರುವ ನರ್ಮದಾ ಕಣಿವೆ ಪ್ರದೇಶವೂ ಇಂಥದು. ಮಹಾರಾಷ್ಟ್ರದ ಲಾವಪ್ರಸ್ಥಭೂಮಿ ಮತ್ತು ಗುಜರಾತ್‍ನಲ್ಲೂ ನೀರಿನ ಬುಗ್ಗೆಗೆ ಅನುಕೂಲಕರವಾದ ಸಂರಚನೆಯಿದೆ.
ಸರಂಧ್ರ ಬಂಡೆಗಲ್ಲುಗಳಿರುವ ಪರ್ವತಪ್ರದೇಶಗಳಲ್ಲಿ ಅಲ್ಲಲ್ಲಿ ನೆಲದ ಅಡಿಯ ನೀರು ಹೊರಗೆ ಬಂದು ತೊರೆಗಳಾಗಿ ಹರಿಯುತ್ತದೆ. ಮೇಘಾಲಯದ ಚಿರಾಪುಂಜಿ (ಖಾಸಿ ಬೆಟ್ಟಗಳು) ಉತ್ತರಪ್ರದೇಶದ ಡೆಹ್ರಾಡೂನ್ ಇಲ್ಲಿ ಇಂಥ ತೊರೆಗಳಿವೆ. ಮಧ್ಯಪ್ರದೇಶದ ರಾಮಘರ್ ಬೆಟ್ಟಗಳ ಮರಳುಗಲ್ಲುಗಳಲ್ಲಿ ನೈಸರ್ಗಿಕವಾಗಿ ಕೊರೆಯಲ್ಪಟ್ಟ ಗುಹೆಗಳನ್ನು ಕಾಣಬಹುದು. ನೆಲದ ಅಡಿಯಿಂದ ಹೊರಬಿದ್ದ ಬುಗ್ಗೆಗಳ ಮತ್ತು ತೊರೆಗಳ ಪ್ರದೇಶಗಳು ಹಿಮಾಲಯದ ಕುಮಾಂವ್, ದಕ್ಷಿಣ ಬಿಹಾರದ ಗುಡ್ಡಗಾಡು ಹಾಗೂ ದಿಣ್ಣೆಗಳು ಮತ್ತು ಪಶ್ಚಿಮ ಘಟ್ಟಗಳ ತಪ್ಪಲು ಇವೆಲ್ಲ ತಣ್ಣೀರಿನವು. ಕೆಲವು ಬಿಸಿನೀರಿನ ಬುಗ್ಗೆಗಳೂ ತೊರೆಗಳೂ ಇಲ್ಲದಿಲ್ಲ. ಇವುಗಳ ಪೈಕಿ ಕೆಲವು ಗಂಧಕದಿಂದ ಕೂಡಿದವು.

	ಭಾರತದಂಥ ವಿಶಾಲ ದೇಶದಲ್ಲಿ ಸರೋವರಗಳೂ ಹೆಚ್ಚಿಲ್ಲ. ಹಿಮಾಲಯ ಪ್ರದೇಶದಲ್ಲಿರುವ ಸರೋವರಗಳು ನೀರ್ಗಲ್ಲ ನದಿಗಳಿಂದ ಕೊರೆಯಲ್ಪಟ್ಟಂಥವು, ಇಲ್ಲವೇ ನೀರ್ಗಲ್ಲ ನದಿಗಳು ತಂದು ಒಟ್ಟಿದ ಮುರುಕಲುಗುಪ್ಪೆಗಳಿಂದ ಕಟ್ಟೆಗಳು ರಚಿತವಾಗಿ ನೀರು ನಿಲ್ಲಲು ಎಡೆಯುಂಟಾದಂಥವು. ವುಲಾರ್ ಕಾಶ್ಮೀರ ಕಣಿವೆಯ ಅತ್ಯಂತ ದೊಡ್ಡ ಸರೋವರ. ಜ್ವಾಲಾಮುಖಿಯ ಕುಳಿಯಿಂದ ಆದ ಸರೋವರಕ್ಕೆ ಉದಾಹರಣೆ ಲೋನಾರ್. ಇದು ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯಲ್ಲಿದೆ. ಪಶ್ಚಿಮ ರಾಜಸ್ಥಾನದ ಮರಳು ಗುಡ್ಡೆಗಳ ನಡುವೆ ಅಲ್ಲಲ್ಲಿ ಹಲವಾರು ಸರೋವರಗಳಿವೆ.

	ಕರಾವಳಿಯ ಮೈದಾನದ ನೆಲದ ರೂಪು ಬೇರೆ ಬಗೆಯದು. ಅಲ್ಲಿ ಕಡಲಿನ ಹಿನ್ನೀರಿನಿಂದಾದ ಸರೋವರಗಳಿವೆ. ಮುಂಬಯಿಯ ರೇವು ಇಂಥದು. ದಕ್ಷಿಣಕ್ಕೆ ಇರುವ ಅಸ್ತಮುಡಿ ಸರೋವರ ಇನ್ನೊಂದು ಮುಖ್ಯವಾದ್ದು.

	ಭಾರತದಲ್ಲಿ ನಾಲ್ಕು ಮುಖ್ಯ ನದೀ ವ್ಯವಸ್ಥೆಗಳಿವೆ: ಹಿಮಾಲಯ, ದಖನ್, ಕರಾವಳಿ ಹಾಗೂ ಒಳನಾಡು. ನದಿಗಳಲ್ಲಿ ಹರಿಯುವ ನೀರಿನ ಒಟ್ಟು ಪರಿಮಾಣ ವಾರ್ಷಿಕವಾಗಿ ಸುಮಾರು 5.67ಘಿ1014 ಲೀಟರುಗಳೆಂದು ಅಂದಾಜು ಮಾಡಲಾಗಿದೆ. ಈ ಅಗಾಧ ಜಲರಾಶಿಯಿಂದ ನದೀಪಾತ್ರಗಳು ಆಳವೂ ವಿಶಾಲವೂ ಆಗುತ್ತಿವೆ. ಸಿಂಧೂನದಿಯ ಪೂರ್ವದ ಉಪನದಿಗಳೂ ಗಂಗಾ ಮತ್ತು ಅದರ ಉಪನದಿಗಳೂ ಬ್ರಹ್ಮಪುತ್ರಾ ನದಿಯೂ ತಂದು ತುಂಬುತ್ತಿರುವ ಮೆಕ್ಕಲು ಮಣ್ಣಿನಿಂದ ಸಿಂಧೂ-ಗಂಗಾ ಬಯಲು ರೂಪುಗೊಂಡಿದೆ. ಪೂರ್ವ ಕರಾವಳಿಯಲ್ಲಿ ಮಹಾನದಿ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳಿಂದ ಮುಖಜ ಭೂಮಿಗಳು ಮೈದಳೆದಿವೆ.

	ಭಾರತದಲ್ಲಿರುವ ಪ್ರಮುಖ ಜಲವಿಭಾಗ ರೇಖೆಗಳು ಮೂರು. ಉತ್ತರದಲ್ಲಿರುವ ಹಿಮಾಲಯ ಮತ್ತು ಅದರ ಕಾರಕೋರಮ್ ಶಾಖೆಯಿಂದ ಉತ್ತರದಲ್ಲೊಂದು ಬೃಹತ್ ಜಲವಿಭಾಗ ರೇಖೆ ನಿರ್ಮಾಣಗೊಂಡಿದೆ. ಮಧ್ಯಭಾರತದಲ್ಲಿ ವಿಂಧ್ಯಾ, ಸಾತ್ಪುರ, ಮೈಕಲ್ ಶ್ರೇಣಿಗಳು ಕೂಡಿ ಇನ್ನೊಂದು ಜಲವಿಭಾಗರೇಖೆಯಾಗಿ ಪರಿಣಮಿಸಿವೆ. ಪಶ್ಚಿಮ ಘಟ್ಟಗಳು ದಕ್ಷಿಣ ಭಾರತದ ಪ್ರಮುಖ ಜಲವಿಭಾಗ ರೇಖೆ.

	ಹಿಮಾಲಯದ ನದಿಗಳಿಗೆ ನೀರು ಒದಗುವುದು ಹಿಮ ಹಾಗೂ ಮಳೆಯಿಂದ. ಆದ್ದರಿಂದ ವರ್ಷವೆಲ್ಲ ಸಾಮಾನ್ಯವಾಗಿ ಇವುಗಳಲ್ಲಿ ಪ್ರವಾಹ ಇರುತ್ತದೆ. ದಕ್ಷಿಣದ ನದಿಗಳಿಗೆ ಮಳೆಯಿಂದ ನೀರು ಒದಗುತ್ತದೆ. ಆದ್ದರಿಂದ ಇವುಗಳ ಪ್ರವಾಹದಲ್ಲಿ ವರ್ಷದ ವಿವಿಧ ಋತುಗಳಲ್ಲಿ ತೀವ್ರ ಏರಿಳಿತಗಳಿರುತ್ತವೆ. ಬೇಸಿಗೆಯಲ್ಲಿ ಇವು ಬಹುತೇಕ ಬತ್ತಿಹೋಗಿರುತ್ತವೆ. ಪಶ್ಚಿಮ ಕರಾವಳಿಯ ನದಿಗಳು ಬಲು ಚಿಕ್ಕವು. ದಕ್ಷಿಣದ ನದಿಗಳ ಜಲಾನಯನ ಪ್ರದೇಶಗಳೂ ಅಷ್ಟೇನೂ ವಿಸ್ತಾರವಾದುದಲ್ಲ. ಪಶ್ಚಿಮ ರಾಜಸ್ಥಾನದ ನದಿಗಳು ಒಳನಾಡಿನ ಉಪ್ಪುನೀರಿನ ಸರೋವರಗಳನ್ನು ಸೇರುತ್ತವೆ ಅಥವಾ ಮರಳಿನಲ್ಲಿ ಬತ್ತಿಹೋಗುತ್ತವೆ. ಅಪವಾದವೆಂದರೆ ಲೂನಿ ಮಾತ್ರ. ಇದು ಕಚ್ಛದ ರಣವನ್ನು ಸೇರುತ್ತದೆ.

	ಗಂಗಾನದಿಯ ಜಲಾನಯನ ಪ್ರದೇಶದ ವಿಸ್ತಾರ 8,38,000 ಚಕಿಮೀ. ಇದು ಇಡೀ ಭಾರತದ ವಿಸ್ತೀರ್ಣದ ನಾಲ್ಕನೆಯ ಒಂದರಷ್ಟು. ಎರಡನೆಯ ದೊಡ್ಡ ಜಲಾನಯನ ಪ್ರದೇಶ ಗೋದಾವರಿಯದ್ದು, ವಿಸ್ತೀರ್ಣ 3,24,000 ಚಕಿಮೀ. ಬ್ರಹ್ಮಪುತ್ರ ನದಿಯದು 2,84,900 ಚಕಿಮೀ. ಭಾರತದ ಭಾಗದಲ್ಲಿರುವ ಸಿಂಧೂ ನದೀಜಲಾನಯನ ಪ್ರದೇಶದ ವಿಸ್ತಾರವೂ ಇಷ್ಟೇ ಇದೆ. ಕೃಷ್ಣಾನದಿಯ ಜಲಾನಯನ ಪ್ರದೇಶ 2,72,000 ಚಕಿಮೀ. ಇದರ ಅನಂತರದ್ದು ಮಹಾನದಿಕೊಳ್ಳ. ನರ್ಮದಾ ಪ್ರದೇಶದ ವಿಸ್ತಾರ 93,250 ಚಕಿಮೀ. ಕಾವೇರಿಯ ಜಲಾನಯನ ಪ್ರದೇಶವೂ ಇಷ್ಟೆ ವಿಸ್ತಾರವಾಗಿದೆ. ನರ್ಮದಾ ಪಶ್ಚಿಮಕ್ಕೆ ಹರಿಯುವ ನದಿ. ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ಪೂರ್ವಾಭಿಮುಖವಾಗಿ ಹರಿಯುತ್ತವೆ.

	ಮಣ್ಣು: ಭಾರತದಲ್ಲಿ ಬಹುತೇಕ ಎಲ್ಲ ಬಗೆಯ ಮಣ್ಣುಗಳಿವೆ. ಮೆಕ್ಕಲು ಮಣ್ಣು, ಮರುಭೂಮಿ ಮಣ್ಣು, ಪರ್ವತ ಹಾಗೂ ಗಿರಿಮಣ್ಣು, ಕಪ್ಪು ಹಾಗೂ ಕೆಂಪು ಮಣ್ಣುಗಳು, ಜಂಬು ಮಣ್ಣು, ಜವುಗಿನಿಂದ ಕೂಡಿದ ತರಾಯ್ ಮಣ್ಣು-ಇವು ಮುಖ್ಯವಾದವು. ಹಿಮಾಚಲ ಪ್ರದೇಶ, ದೆಹಲಿ ಜಮ್ಮು ಮತ್ತು ಕಾಶ್ಮೀರ ಇವನ್ನುಳಿದ ಬೇರೆ ಎಲ್ಲ ರಾಜ್ಯಗಳಲ್ಲೂ ಮೆಕ್ಕಲು ಮಣ್ಣನ್ನು ಕಾಣಬಹುದು. ಕೇರಳ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಪಶ್ಚಿಮಬಂಗಾಲ ಮತ್ತು ತಮಿಳುನಾಡು ರಾಜ್ಯಗಳ ಕರಾವಳಿಗಳಲ್ಲಿ ಈ ಮಣ್ಣು ಇದೆ. ಅಸ್ಸಾಮ್ ಮತ್ತು ಮಧ್ಯಪ್ರದೇಶ ರಾಜ್ಯಗಳ ಉತ್ತರ ಭಾಗಗಳಲ್ಲೂ ಇದೆ.

	ಆಂಧ್ರ ಪ್ರದೇಶದಲ್ಲಿ ಫಲವತ್ತಾದ ಕಪ್ಪು ಮಣ್ಣೂ ಕೆಂಪು ಮಣ್ಣೂ ಇವೆ. ಮಹಾರಾಷ್ಟ್ರ ಮಣಿಪುರಗಳಲ್ಲಿ ಕಪ್ಪು ಮಣ್ಣೂ ತಮಿಳುನಾಡಿನಲ್ಲಿ ಕೆಂಪು ಮಣ್ಣೂ ಸಾಮಾನ್ಯ. ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕಗಳಲ್ಲಿ ಜಂಬುಮಣ್ಣಿನ ಪ್ರದೇಶಗಳಿವೆ. ಕರ್ನಾಟಕದಲ್ಲಿ ಕಪ್ಪು ಹಾಗೂ ಕೆಂಪು ಮಣ್ಣಿನ ನೆಲಗಳು ಹೆಚ್ಚು. ರಾಜಸ್ಥಾನದಲ್ಲಿ ಶುಷ್ಕ ಮರುಭೂಮಿಯ ಮಣ್ಣು ಸಾಮಾನ್ಯ. ತರಾಯ್ ಉತ್ತರ ಪ್ರದೇಶದ ಮೈದಾನ ಹಾಗೂ ಗಿರಿಪ್ರದೇಶಗಳ ನಡುವೆ ಇದೆ. ಸಸ್ಯಾಂಗಾರ ಇಂಗಾಲ ಮತ್ತು ಇತರ ಆಗ್ರ್ಯಾನಿಕ್ ವಸ್ತುಯುಕ್ತ ಮಣ್ಣುಗಳು ಕೇರಳದಲ್ಲೂ ಬಿಹಾರದಲ್ಲೂ ಕೆಲವೆಡೆಗಳಲ್ಲಿವೆ.

	ವಾಯುಗುಣ: ಭಾರತದಲ್ಲಿ ವಾಯುಗುಣ ಹಿಂಗಾರು, ಮುಂಗಾರು (ಮಾನ್ಸೂನ್) ಮಾರುತಗಳಿಂದ ವಿಶೇಷವಾಗಿ ಪ್ರಭಾವಿತವಾದ್ದು. ಇಲ್ಲಿ ಸ್ಥೂಲವಾಗಿ ನಾಲ್ಕು ಋತುಗಳಿವೆ. ಡಿಸೆಂಬರಿನಿಂದ ಮಾರ್ಚ್ ತನಕ ಚಳಿಗಾಲ, ಏಪ್ರಿಲಿನಿಂದ ಮೇ ತನಕ ಬೇಸಗೆ, ಜೂನಿನಿಂದ ಸೆಪ್ಟೆಂಬರ್ ತನಕ ಕಾರ್ಗಾಲ (ಮಾನ್ಸೂನ್), ಅಕ್ಟೋಬರಿನಿಂದ ನವೆಂಬರ್ ತನಕ ಹಿನ್ನೆಡೆಯುವ ನೈಋತ್ಯ ಮಾನ್ಸೂನ್ ಅಥವಾ ಹಿಂಗಾರು ಕಾಲ. ಆದರೆ ವಾಸ್ತವವಾಗಿ ಗುರುತಿಸಬಹುದಾದ ಋತುಗಳು ಮೂರು ಮಾತ್ರ. ಚಳಿಗಾಲ (ನವೆಂಬರ್-ಫೆಬ್ರವರಿ), ಬೇಸಗೆ (ಮಾರ್ಚ್-ಜೂನ್), ಮಳೆಗಾಲ (ಜೂನ್-ಅಕ್ಟೋಬರ್). ಭಾರತದಲ್ಲಿ ಮಳೆ ಹಾಗೂ ಉಷ್ಣತೆ ವಿಪರೀತವಾಗಿ ವ್ಯತ್ಯಾಸವಾಗುತ್ತದೆ. ಮಳೆ ತರುವ ಮಾರುತಗಳು ಎರಡು: ಡಿಸೆಂಬರಿನಿಂದ ಫೆಬ್ರವರಿ ತನಕ ಈಶಾನ್ಯ, ಮೇ ಯಿಂದ ಸೆಪ್ಟೆಂಬರ್ ತನಕ ನೈರುತ್ಯ ಮಾರುತ ಬೀಸುತ್ತವೆ. ಮಳೆಗೆ ಅನುಗುಣವಾಗಿ ಭಾರತದಲ್ಲಿ ನಾಲ್ಕು ಬಗೆಯ ವಾಯುಗುಣ ಪ್ರದೇಶಗಳನ್ನು ಗುರುತಿಸಬಹುದು. ಇಡೀ ಅಸ್ಸಾಮ್ ಮತ್ತು ನೆರೆಯ ಪ್ರದೇಶ ಹಾಗೂ ಪಶ್ಚಿಮ ಘಟ್ಟಗಳು ಮತ್ತು ಬದಿಯ ಕರಾವಳಿಯಲ್ಲಿ ಅಧಿಕ ಮಳೆಯಾಗುತ್ತದೆ (ವಾರ್ಷಿಕವಾಗಿ 1080 ಸೆಂ.ಮೀ). ರಾಜಸ್ತಾನದ ಮರುಭೂಮಿ ಮತ್ತು ಕಾಶ್ಮೀರದ ಲಡಾಕ್ ಪ್ರಸ್ಥಭೂಮಿಗಳಲ್ಲಿ ಮಳೆ ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ದಖನ್ ಪ್ರಸ್ಥಭೂಮಿಯ ಪೂರ್ವಭಾಗ ಹಾಗೂ ಇದರ ಉತ್ತರಕ್ಕಿರುವ ಪ್ರದೇಶಗಳಲ್ಲಿ ವರ್ಷಕ್ಕೆ ಸುಮಾರು 155 ಸೆಂ.ಮೀ ಮಳೆ. ಪಂಜಾಬಿನಿಂದ ಹಿಡಿದು, ವಿಂಧ್ಯ ಶ್ರೇಣಿಯ ದಕ್ಷಿಣದಲ್ಲಿ ದಖನ್ ಪ್ರಸ್ಥಭೂಮಿಯ ಪಶ್ಚಿಮಭಾಗವೂ ಸೇರಿ ದಕ್ಷಿಣದ ತುದಿಯವರೆಗಿನ ಪ್ರದೇಶದಲ್ಲಿ ವಾರ್ಷಿಕವಾಗಿ 76 ಸೆಂಮೀ ಮಳೆ. ಉಷ್ಣತೆಯೂ ಭಾರತದ ವಿವಿಧ ಭಾಗಗಳಲ್ಲಿ ವ್ಯತ್ಯಾಸವಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ 12( ಸೆ. -14( ಸೆ. ಸರಾಸರಿ ಉಷ್ಣತೆ; ಅಲಹಾಬಾದಿನಲ್ಲಿ 26(ಅ; ಹಿಮಾಲಯದ ತಪ್ಪಲು ಬೆಟ್ಟಗಳಲ್ಲಿ 22(ಅ ತಮಿಳುನಾಡಿನ ಕೆಲವೆಡೆಗಳಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 29.5(ಅ ಇದು ಗರಿಷ್ಠ ಉಷ್ಣತೆ.

	ಸಸ್ಯ ಸಂಪತ್ತು: ಉತ್ತರ ಅಕ್ಷಾಂಶ 8(4' ನಿಂದ 37(6' ವರೆಗೆ ಹಬ್ಬಿರುವ ಭಾರತದ ಉಷ್ಣತೆ ಹಾಗೂ ಮಳೆಯ ವ್ಯತ್ಯಾಸಗಳಿಂದಾಗಿ ಮತ್ತು ಇದರ ವಿವಿಧ ಔನ್ನತ್ಯಗಳಿಂದಾಗಿ ಇಲ್ಲಿಯ ಸಸ್ಯರಾಶಿ ಸಂಪದ್ಯುಕ್ತವೂ ವೈವಿಧ್ಯಪೂರಿತವೂ ಆಗಿದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ.

	ದಕ್ಷಿಣದಲ್ಲಿ ಪಶ್ಚಿಮಘಟ್ಟಗಳಿಗೆ ಪಶ್ಚಿಮದಲ್ಲಿರುವ ಕಿರಿದಾದ ಕರಾವಳಿಯಲ್ಲಿ ಮುಖ್ಯವಾಗಿ ಮಲಬಾರ್ ಪ್ರದೇಶದಲ್ಲಿ ಹಾಗೂ ಪಶ್ಚಿಮ ಘಟ್ಟಗಳ ದಕ್ಷಿಣಭಾಗದ ಪಶ್ಚಿಮಪಾಶ್ರ್ವದಲ್ಲಿ ಉಷ್ಣವಲಯದ ಸಸ್ಯವರ್ಗ ದಟ್ಟವಾಗಿದೆ. ಇಲ್ಲಿ ತೆಂಗು, ಅಡಿಕೆ, ಮೆಣಸು, ಶುಂಠಿ, ರಬ್ಬರ್, ವಾಣಿಜ್ಯ ಬೆಳೆಗಳು. ಘಟ್ಟಗಳ ಇನ್ನೂ ಎತ್ತರ ಭಾಗದಲ್ಲಿ ಕಾಫಿ, ಚಹಾ, ಯಾಲಕ್ಕಿ ತೋಟಗಳಿವೆ. ಕಾಡುಗಳಲ್ಲಿ ತೇಗ, ಹೊನ್ನೆ, ಬೀಟೆ ಮುಂತಾದ ಗಟ್ಟಿ ಮರಗಳೂ ಹಲವಾರು ಮೆದು ಮರಗಳೂ ಬೊಂಬೂ ಬೆಳೆಯುತ್ತವೆ.

	ಸಿಂಧೂನದಿ ಪ್ರದೇಶವಾದ ಪಂಜಾಬ್ ಬಯಲು, ರಾಜಸ್ಥಾನ, ಕಛ್, ಉತ್ತರ ಗುಜರಾತ್ ಈ ಸ್ಥಳಗಳಲ್ಲಿ ಸ್ಥಳೀಯ ಸಸ್ಯಗಳು ಬಲುಕಡಿಮೆ. ಯಮುನಾ ನದಿಯಿಂದ ಪಶ್ಚಿಮ ಬಂಗಾಲದವರೆಗೆ ಹಬ್ಬಿರುವ ಗಂಗಾಬಯಲಿನಲ್ಲಿ ಹಾಗೂ ಒರಿಸ್ಸಾದಲ್ಲಿ ನಾನಾ ಪ್ರರೂಪಗಳ ಕಾಡುಗಳಿವೆ. ಸಾಲ ವೃಕ್ಷಗಳು ಸಾಮಾನ್ಯ. ಅಸ್ಸಾಮ್ ಪ್ರದೇಶದಲ್ಲಿ ಬ್ರಹ್ಮಪುತ್ರಾ ಹಾಗೂ ಸುರಮಾ ನದೀ ಕಣಿವೆಗಳಲ್ಲಿ ಹಾಗೂ ಗಿರಿಶ್ರೇಣಿಗಳಲ್ಲಿ ಎತ್ತರವಾದ ಹುಲ್ಲೂ ಅಗಲ ಎಲೆಯ ಕಾಡುಗಳೂ ಬಿದಿರು ಮೆಳೆಗಳೂ ದಟ್ಟವಾಗಿವೆ. ದಖನ್ ಪ್ರದೇಶದ ಎತ್ತರ ಶುಷ್ಕ ನೆಲಗಳಲ್ಲಿ ಸ್ಥಳೀಯವಾಗಿ ತಾಳೆ ಜಾತಿಯ ಮರಗಳು ವಿಶೇಷ.
ಪೂರ್ವ ಹಿಮಾಲಯ ಪ್ರದೇಶದಲ್ಲಿ ಹೂಬಿಡುವ ಸಾವಿರಾರು ಸಸ್ಯಗಳಲ್ಲಿ ನಾನಾ ಬಗೆಯ ತಾಳೆ ಜಾತಿಯ ಮರಗಳೂ ಇವೆ ಲಾರೆಲ್, ಮೇಪಲ್, ಅಲ್ಡರ್, ಭೂರ್ಜ, ಶಂಕುಪರ್ಣಿ, ಜೂನಿಪರ್, ರೋಡೊಡೆಂಡ್ರಾನ್, ಬಿದಿರು ಮುಂತಾದವೂ ವ್ಯಾಪಕವಾಗಿವೆ. ಪಶ್ಚಿಮ ಹಿಮಾಲಯ ಪ್ರದೇಶದ ಸಸ್ಯಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು: ಉನ್ನತ ಪ್ರದೇಶದ ಅಲ್ಪೈನ್ ಮಾದರಿಯವು, ಸಮ ಶೀತೋಷ್ಣಪ್ರದೇಶದವು, ತಗ್ಗಿನಪ್ರದೇಶದವು ಅಲ್ಪೈನ್ ಪ್ರದೇಶದ ಮರಗಳು ಬೆಳ್ಳಿಗೆರೆ ಎಲೆಗಳಿಂದ ಕೂಡಿದ ಶಂಕುಫಲಿ (ಫರ್), ರಜತ ಭೂರ್ಜ, ಜೂನಿಪರ್ ಸಮಶೀತೋಷ್ಣಪ್ರದೇಶದ ಮರಗಳು ಶಂಕುಪರ್ಣಿ, ರಜತ ರೇಖಾರ್ಪಣದ ಶಂಕುಫಲಿ, ದೇವದಾರು, ಸ್ಟ್ರೂಸ್, ರಜತಭೂರ್ಜ. ಇನ್ನಷ್ಟು ತಗ್ಗಿನ ಪ್ರದೇಶದಲ್ಲಿ ಸಾಲುವೃಕ್ಷಗಳ ಆರಣ್ಯಗಳೂ ತಾಳೆಜಾತಿಯ ಮರಗಳೂ ಇವೆ. ಬಂಗಾಲದ ಕಡಲ ಕರೆಯಲ್ಲಿ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಗುಲ್ಮವೃಕ್ಷಗಳೂ ಬೀಚ್ ಮರಗಳೂ ನಿತ್ಯ ಹರಿತ್ ಹಾಗೂ ಪರ್ಣಪಾತಿ ಮರಗಳೂ ಇವೆ.
ಭಾರತದಲ್ಲಿ ಸಾಗುವಳಿ ಮಾಡಿ ಬೆಳೆಸುತ್ತಿರುವ ಸಸ್ಯಗಳು ಬತ್ತ, ಗೋದಿ, ಬೇಳೆಕಾಳು, ಹರಳು, ಎಳ್ಳು, ನೆಲಗಡಲೆ ಇತ್ಯಾದಿ. ಮಾವು, ತೆಂಗು, ಅಡಿಕೆ ಜಂಬೀರ ಇವು ಫಲ ವೃಕ್ಷ ಹಾಗೂ ಸಸ್ಯಗಳು. ಹಿಮಾಲಯದ ಕಣಿವೆಗಳಲ್ಲಿ ಸೇಬು, ಪೀಚಸ್, ಪಿಯರ್ಸ್, ಆಪ್ರಿಕಾಟ್, ವಾಲ್ನಟ್ ಬೆಳೆಯುತ್ತಾರೆ. ಈಶಾನ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಚಹಾತೋಟಗಳಿವೆ. ಕಾಫಿ, ಯಾಲಕ್ಕಿ, ಮೆಣಸು, ರಬ್ಬರ್ ದಕ್ಷಿಣದಲ್ಲಿ ಬೆಳೆಯುತ್ತವೆ. ಸಿಂಕೋನ ತೇವದನೆಲದ ಬೆಳೆ.
ಪ್ರಾಣಿ ಜೀವನ: ಭಾರತದಲ್ಲಿ ವೈವಿಧ್ಯಮಯ ವನ್ಯಮೃಗಗಳಿವೆ. ಹುಲಿ, ಚಿರತೆ ಹಲವಡೆಗಳಲ್ಲಿವೆ. ನಾಲ್ಕು ಬಗೆಯ ಚಿರತೆಗಳಿವೆ. ಸಿಂಹ ಈಗ ಸೌರಾಷ್ಟ್ರದ ಗಿರ್ ಅರಣ್ಯಕ್ಕೆ ಸೀಮಿತ. ಒರಿಸ್ಸಾ, ಪಶ್ಚಿಮ ಘಟ್ಟಗಳ ಕಾಡುಗಳು, ತಮಿಳುನಾಡಿನ ಉತ್ತರ  ಕೊಯಮತ್ತೂರು ಮತ್ತು ಅಸ್ಸಾಮ್ ಇಲ್ಲಿ ಆನೆಗಳು ಹೆಚ್ಚಾಗಿವೆ. ಅಸ್ಸಾಮಿನಲ್ಲಿ ಖಡ್ಗಮೃಗಗಳಿವೆ. ಕಪ್ಪು ಹಾಗೂ ಕೆಂಪು ಕರಡಿ, ಜಿಂಕೆ, ಗಜಲ್, ಆಡು, ಕುರಿ ಎಲ್ಲೆಲ್ಲೂ ಇವೆ. ಪಂಡಾ, ಮಾರ್ಟಿನ್, ವೀಸೆಲ್, ಆಟರ್, ಪುನುಗು ಬೆಕ್ಕು, ಮುಂಗುಸಿ ಇವು ಸಾಮಾನ್ಯ. ಕಿರುಬ ಹಲವೆಡೆಗಳಲ್ಲಿವೆ. ತೋಳಗಳು ಎರಡು ಬಗೆ. ಕೂದಲಿನಿಂದ ಕೂಡಿದ ಪಶ್ಚಿಮ ಹಿಮಾಲಯದ ತೋಳ, ಸಣ್ಣ ಭಾರತೀಯ ತೋಳ ಇವಲ್ಲದೆ ನರಿ, ಗುಳ್ಳೆ ನರಿ, ಕಾಡುನಾಯಿ, ಕಾಡು ಬೆಕ್ಕುಗಳೂ ಇವೆ. ಲಿಂಕ್ಸ್ ವಿಶೇಷವಾಗಿ ಕಾಶ್ಮೀರದಲ್ಲಿದೆ. ಕಾರಕುಲ್ (ಏಷ್ಯಾದ ಕುರಿ) ವಾಯುವ್ಯ ಭಾರತದ ಪ್ರಾಣಿ. ಎರಡು ಬಗೆಯ ಕಾಡು ಹಂದಿಗಳೂ ಹಲ ಬಗೆಯ ಜಿಂಕೆಗಳೂ ದೇಹದ ಹಲವೆಡೆಗಳಲ್ಲಿ ಹರಡಿದೆ. ಕಸ್ತೂರಿ ಮೃಗದ ನೆಲೆ ಕಾಶ್ಮೀರ. ಸಿಕ್ಕಿಮಿನ ಕಡವೆ ವಿರಳವಾಗುತ್ತಿದೆ. ಕಾಶ್ಮೀರದ ಕಡವೆ ನಷ್ಟವಾಗುವ ಹಂತದಲ್ಲಿದೆ. ಇದು ರಕ್ಷಿತ ಮೃಗ. ಭಾರತೀಯತ ಗಜಲ್ ನಾಲ್ಕು ಕೊಂಬುಗಳ ಚಿಗರಿ, ಭಾರತೀಯ ಕಪ್ಪು ಜಿಂಕೆ (ಬ್ಲ್ಯಾಕ್ ಬಕ್) ನಾನಾ ಕಡೆಗಳಲ್ಲಿವೆ. ಕಾಡೆಮ್ಮೆಗೆ ಬಂಡಿಪುರ ಮತ್ತು ಮದುಮಲೈ ಅಭಯಾರಣ್ಯಗಳಲ್ಲಿ ರಕ್ಷಣೆ ದೊರಕಿದೆ. ನೀಲ್ಗೈ ಪಶ್ಚಿಮ ಬಂಗಾಲ ಮತ್ತು ಮಲಬಾರುಗಳನ್ನುಳಿದು ಭಾರತದಲ್ಲೆಲ್ಲ ಕಂಡು ಬರುತ್ತದೆ. ಸುರುಳಿಕೊಂಬುಗಳ ಕಾಡು ಮೇಕೆ, ಐಬೆಕ್ಸ್ (ಇನ್ನೊಂದು ಬಗೆಯ ಕಾಡು ಮೇಕೆ) ಹಿಮಾಲಯ ಪ್ರದೇಶ ವಾಸಿಗಳು. ಚಮರೀಮೃಗ ಲಡಾಖಿನಲ್ಲಿದೆ.

ಭಾರತದ ಸರೀಸೃಪಗಳ ಪೈಕಿ ನಾಗರಹಾವು ಬಹಳ ಪರಿಚಿತ. ಅಲ್ಲದ ಕ್ರೈಟ್, ಮಂಡಲ, ಕೇರೆ, ಹಸುರು ಮುಂತಾದ ಅನೇಕ ಬಗೆಯ ಹಾವುಗಳಿವೆ. ಮೊಸಳೆಗಳು ಮೂರು ಬಗೆ. ಇಪ್ಪತ್ತು ಬಗೆಯ ಆಮೆಗಳಿವೆ.

ಭಾರತದ ಸಾಕು ಪ್ರಾಣಿಗಳು ದನ, ಎಮ್ಮೆ ಕುರಿ, ಆಡು, ಕುದುರೆ, ಟಾಕಣ, ಹೇಸರಗತ್ತೆ, ಕತ್ತೆ ಮತ್ತು ಒಂಟೆ.
ಭಾರತದಲ್ಲಿ ಸುಮಾರು 1200 ಜಾತಿ ಪಕ್ಷಿಗಳಿವೆ. ಉಪಜಾತಿಗಳನ್ನೂ ಸೇರಿಸಿದರೆ ಈ ಸಂಖ್ಯೆ 2000 ಆಗುತ್ತದೆ. ಇವುಗಳ ಪೈಕಿ 250 ಜಾತಿ ಪಕ್ಷಿಗಳು ಅನ್ಯದೇಶಗಳಿಂದ ವಲಸೆ ಬರುವಂಥವು. ಹದ್ದು, ಡೇಗೆ, ಗಿಡುಗ ಇವು ಹಿಂಸ್ರಪಕ್ಷಿಗಳು. ಇವಲ್ಲದೆ ಪೆಲಿಕನ್, ಕಾರ್ಮೊರೆಂಟ್, ಫ್ರಿಗೇಟ್, ಡಾರ್ಟರ್ (ಜಾಲಪಾದಿ), ಗಿಳಿ, ಮಿಂಚುಳ್ಳಿ, ಕ್ರೌಂಚ, ಮೈನ, ಬಾತು, ನವಿಲು, ಪಾರಿವಾಳ ಮುಂತಾದ ನಾನಾ ಜಾತಿಯ ಪಕ್ಷಿಗಳು ಯಥೇಚ್ಛವಾಗಿವೆ. ಭಾರತದ ನದಿ ಕೋಗಿಲೆ ಸರೋವರಗಳಲ್ಲಿ ಇರುವ ಮೀನುಗಳು ನಾನಾ ಬಗೆ. ಸೊಳ್ಳೆ. ಮಿಡತೆಗಳು ಉಪದ್ರವಕಾರಿ ಕೀಟಗಳು. ಉಪಯುಕ್ತ ಕೀಟಗಳು ಜೇನು, ರೇಷ್ಮೆಹುಳು, ಅರಗುಕೀಟ ಇತ್ಯಾದಿ. ಸುಂದರವಾದ ಹಲವಾರು ಜಾತಿಯ ಚಿಟ್ಟೆಗಳೂ ಇವೆ.
ಮಾನವ ಭೂವಿವರಣೆ. ಜನಾಂಗಮೂಲ: ಭಾರತದ ಜನ ವಿಶೇಷವಾಗಿ ಹಿಮಾಲಯದಿಂದಾಚೆಯಿಂದ ವಲಸೆ ಬಂದವರ ವಂಶಗಳವರು. ಭಾರತದ ನೆಲದಲ್ಲೆ ಮೂಲತಃ ಇದ್ದ ಜನಾಂಗಗಳು ಯಾವುವು ಎಂಬ ಬಗ್ಗೆ ಖಚಿತವಾಗಿ ಇನ್ನೂ ಹೇಳುವಂತಿಲ್ಲ. ರಾಮಪಿತೆಕಸ್ ಎಂಬ ಜನಾಂಗ ವಾಯುವ್ಯ ಹಿಮಾಲಯ ಪ್ರದೇಶದ ಸಿವಾಲಿಕ್ ತಪ್ಪಲು ಬೆಟ್ಟಗಳಲ್ಲಿತ್ತು. ಸುಮಾರು 140 ಲಕ್ಷ ವರ್ಷ ಹಿಂದೆ ಇದ್ದ ಮಾನವ ಕುಲದವರಾದ ಹೋಮಿನಿಡ್‍ಗಳ ನೇರ ವಂಶಸ್ಥರು ಇವರೆಂದು ನಂಬಲಾಗಿದೆ. ಸುಮಾರು 20ಲಕ್ಷ ವರ್ಷಗಳ ಹಿಂದೆ ಅಸ್ಟ್ರಲೋ ಪಿತೆಕಸ್ ಎಂಬ ಜನಾಂಗ ಇಲ್ಲಿ ವಾಸಿಸುತ್ತಿತ್ತೆಂಬುದಾಗಿಯೂ ತಿಳಿದುಬಂದಿದೆ. ರಾಮಪಿತೆಕಸ್‍ನಿಂದ ಅಸ್ಟ್ರಲೋಪಿತೆಕಸ್‍ವರೆಗಿನ ಸುಮಾರು 120 ಲಕ್ಷ ವರ್ಷಗಳ ವಿಕಾಸದ ಸ್ವರೂಪ ಇನ್ನೂ ಗೊತ್ತಾಗಿಲ್ಲ.
ಭಾರತದ ಜನಾಂಗೀಯ ಉಗಮ ವಿಕಾಸಗಳ ಬಗ್ಗೆ ಅಷ್ಟೇನೂ ಸಂಶೋಧನೆ ನಡೆದಿಲ್ಲ. ಭಾರತೀಯರು ಬಹುಮೂಲ ವಂಶಿಗಳು; ಅನೇಕ ಬುಡಕಟ್ಟುಗಳ ತಳಿಗಳ ಸಂಕೀರ್ಣಮಿಶ್ರಣ ಅವರು. ಯಾವುದೇ ಒಂದು ಕುಲಕ್ಕೆ ಸೇರಿದವರು ತಾವು ಎಂದು ಹೇಳಿಕೊಳ್ಳಬಲ್ಲವರು ಬಹುತೇಕ ಇಲ್ಲವೇ ಇಲ್ಲ. ಶುದ್ಧ ಆರ್ಯನ್ ಅಥವಾ ಬೇರಾವುದೇ ಬುಡಕಟ್ಟಿನವರೆಂದು ಯಾರೂ ಹೇಳಿಕೊಳ್ಳುವಂತಿಲ್ಲ. ಭಾರತದ ಜನ ಆರು ಮುಖ್ಯ ಜನಾಂಗಗಳಿಂದ ಬಂದವರು. ನೆಗ್ರಿಟೋ, ಪ್ರೋಟೊ ಅಸ್ಟ್ರಲಾಯ್ಡ್ ಅಥವಾ ಅಸ್ಟ್ರಿಕ್, ಮಂಗೋಲಾಯ್ಡ್, ಮೆಡಿಟರೇನಿಯನ್ ಅಥವಾ ದ್ರಾವಿಡ, ಪಶ್ಚಿಮ ಬ್ರಾಕೈಸೆಫಾಲಿಕ್ ಮತ್ತು ನಾರ್ಡಿಕ್ ಆರ್ಯ. ಭಾರತಕ್ಕೆ ಬಂದ ಅತ್ಯಂತ ಪ್ರಾಚೀನರು ಆಫ್ರಿಕದ ಬ್ರಾಕೈಸೆಫಾಲಿಕ್ (ಅಗಲ ತಲೆಯ) ನೆಗ್ರಾಯಿಡರು. ದಕ್ಷಿಣ ಭಾರತದ ಗುಡ್ಡಗಾಡು ಜನರಲ್ಲಿ ಮಾತ್ರ ಈಗ ಇವರ ಲಕ್ಷಣಗಳನ್ನು ಕಾಣಬಹುದು (ಇರುಳರು, ತೋಡರು, ಪಣಿಯರು, ಕುರುಬರು). ಅಂಡಮಾನ್ ದ್ವೀಪಗಳಲ್ಲಿ ಈ ಜನಾಂಗ ಉಳಿದಿದೆ. ಇವರ ಭಾಷೆಯೂ ಅಲ್ಲಿ ಉಳಿದಿದೆ. ಪ್ರೋಟೊಆಸ್ಟ್ರಲಾಯ್ಡ್‍ರದು ಗುಂಗುರು ಕೂದಲಿನ ಉದ್ದತಲೆ, ಕಿರುಹಣೆ. ಆಸ್ಟ್ರಿಕರದು ನಡು ಎತ್ತರ ಕಪ್ಪು ಬಣ್ಣ. ನಿಗ್ರಾಯಿಡರೊಂದಿಗೆ ಇವರು ಮಿಶ್ರ ಹೊಂದಿ ಭಾರತದಲ್ಲೆಲ್ಲ ಹರಡಿದರು. ಬರ್ಮಾ ವಲಯಗಳಿಗೂ ಆಗ್ನೇಯ ಏಷ್ಯದ ದ್ವೀಪಗಳಿಗೂ ಸಾಗಿದರು. ಇವರು ಭಾರತದ ಜನಸಂಖ್ಯೆಯ ಅಸ್ತಿವಾರ ಸ್ವರೂಪ. ಭಾರತೀಯ ನಾಗರೀಕತೆಯ ಸ್ಥಾಪಕರಿವರು. ಬತ್ತ ಮತ್ತು ತರಕಾರಿ ಬೆಳೆಸುತ್ತಿದ್ದರು. ಕಬ್ಬಿನಿಂದ ಸಕ್ಕರೆ ಸಂಸ್ಕರಿಸುವುದು ಇವರಿಗೆ ಗೊತ್ತಿತ್ತು. ಕೋಲ, ಮುಂಡ ಭಾಷೆಗಳಲ್ಲಿ ಇವನ ಅಂದಿನ ಭಾಷೆ ಉಳಿದಿದೆ. ದ್ರಾವಿಡರಲ್ಲಿ ಮೂರು ಉಪವಿಭಾಗಗಳಿವೆ. ಪುರಾ ಮೆಡಿಟರೇನಿಯನ್, ಸೈಜ ಮೆಡಿಟರೇನಿಯನ್ ಮತ್ತು ಪ್ರಾಚ್ಯ ಮೆಡಿಟರೇನಿಯನ್. ಇವರೂ ಏಷ್ಯ ಮೈನರ್ ಮತ್ತು ಕ್ರೀಟಿನ ಜನರೂ ಗ್ರೀಕ್ ಸಂಸ್ಕøತಿಯು ಹಿಂದಿನ ಗ್ರೀಸಿನ ಈಜಿಯನರೂ ಒಂದೇ ಎಂದು ಕಾಣುತ್ತದೆ. ಸಿಂಧೂ ಕೊಳ್ಳದ ನಗರ ನಾಗರಿಕತೆಯನ್ನು ನಿರ್ಮಿಸಿದವರು ಇವರೇ ಎಂದು ಪ್ರತೀತಿ. ಹರಪ್ಪಾ, ಮೆಹೆಂಜೊದಾರೊ ಮುಂತಾದ ನೆಲೆಗಳಲ್ಲಿ ಈ ಹಳೆಯ ನಾಗರಿಕತೆಯ ಕುರುಹುಗಳಿವೆ. ದ್ರಾವಿಡರು ಇಡೀ ಭಾರತದಲ್ಲಿ ಹರಡಿ ಆಸ್ಟ್ರಿಕರು ಹಾಗೂ ನೆಗ್ರಿಟೋಗಳನ್ನು ತಳಕೀಳುವಂತೆ ಮಾಡಿದ್ದಿರಬಹುದು. ಮಂಗೊಲಾಯ್ಡರು ಭಾರತದ ಈಶಾನ್ಯ ಭಾಗಕ್ಕೆ ಸೀಮಿತ. ಹಳದಿ ಬಣ್ಣ, ಉಬ್ಬಿದ ಕಪಾಲ, ವಿರಳ ಕೂದಲು, ನಡು ಎತ್ತರ-ಇವರ ಲಕ್ಷಣ. ಭಾರತಕ್ಕೆ ವಲಸೆ ಬಂದ ನಾರ್ಡಿಕ್ ಆರ್ಯರು ಇಂಡೊ ಇರಾನಿಯನ್ನರ ಒಂದು ಶಾಖೆ. ಸುಮಾರು ಐದು ಸಾವಿರ ವರ್ಷ ಹಿಂದೆ ಇವರು ಮಧ್ಯ ಏಷ್ಯಾ ಬಿಟ್ಟು ಮೆಸೊಪೊಟೋಮಿಯದಲ್ಲಿ ಕೆಲವು ಶತಮಾನಗಳ ಕಾಲ ನೆಲೆಸಿದ್ದರು. ಇವರು ಕ್ರಿ.ಪೂ. 2000-1500ರಲ್ಲಿ ಭಾರತಕ್ಕೆ ಬಂದಿದ್ದಿರಬಹುದು. ಆರ್ಯರು ಗ್ರಾಮವಾಸಿಗಳು. ಇವರು ನಗರವಾಸಿ ಸಿಂಧೂ ಕೊಳ್ಳದ ಜನರನ್ನೆದುರಿಸಿದ್ದಿರಬೇಕು. ಕ್ರಮೇಣ ಇವರು ಭಾರತವನ್ನೆಲ್ಲ ಆವರಿಸಿ ಸಿಂಧೂ ಜನರೊಂದಿಗೆ ಬೆರೆತುಕೊಂಡರೆಂದು ಭಾವಿಸಬಹುದು.

ಜನಸಂಖ್ಯೆ: ಪ್ರಪಂಚದ ನೆಲದ ವಿಸ್ತೀರ್ಣದಲ್ಲಿ ಭಾರತ ಶೇಕಡಾ ಕೇವಲ 2.4ರಷ್ಟಿದ್ದರೂ ಇಲ್ಲಿಯ ಜನಸಂಖ್ಯೆ 68,38,10,051. ಇದರಲ್ಲಿ ಗಂಡಸರ ಸಂಖ್ಯೆ 35,33,47,249. ಹೆಂಗಸರದು 33,04,62,802. 1911-21 ಅವಧಿಯನ್ನು ಬಿಟ್ಟರೆ ಭಾರತದ ಜನಸಂಖ್ಯೆ ಕಳೆದ 80 ವರ್ಷಗಳಲ್ಲಿ (1901-81) ಬೆಳೆಯುತ್ತಲೇ ಬಂದಿದೆ. 1951ರಿಂದ ಬೆಳೆವಣಿಗೆಯ ದರ ಬಹುವಾಗಿ ಏರಿದೆ. 1971-81ರಲ್ಲಿ ಭಾರತದ ಜನಸಂಖ್ಯೆ 13.6 ಕೋಟಿಯಷ್ಟು ಅಧಿಕ. ವಿವಿಧ ರಾಜ್ಯಗಳಲ್ಲಿ ಏರಿಕೆಯ ದರಗಳು ವಿಭಿನ್ನವಾಗಿವೆ. ಕೇರಳ, ಒರಿಸ್ಸ, ತಮಿಳುನಾಡು ರಾಜ್ಯಗಳಲ್ಲಿ 1971-81ರಲ್ಲಿ 1961-71ರಲ್ಲಿ ಆದ ಏರಿಕೆಗಿಂತ ಹೆಚ್ಚಿನ ಏರಿಕಯಾಗಿದ್ದರೂ ಏರಿಕೆಯ ದರ ವಾಸ್ತವವಾಗಿ ಕಡಿಮೆಯಾಗಿದೆ.
ದೆಹಲಿ, ಚಂಡೀಗಢ, ಲಕ್ಷದ್ವೀಪ, ಪುದುಚೇರಿ ಈ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನ ಸಾಂದ್ರತೆ ಚಕಿಮೀಗೆ 1000ಕ್ಕಿಂತ ಅಧಿಕ. ಇತರ ಕೇಂದ್ರಶಾಸಿತ ಪ್ರದೇಶಗಳ ಹಾಗೂ ರಾಜ್ಯಗಳ ಪೈಕಿ ಕೇರಳದ ಜನಸಾಂದ್ರತೆ ಅತ್ಯಧಿಕ (ಚ. ಕಿಮೀಗೆ 654) ಪಶ್ಚಿಮ ಬಂಗಾಲದ್ದು ಎರಡನೆಯ ಸ್ಥಾನ (614), ಕರ್ನಾಟಕ 14ನೆಯದು (193).
ಸ್ತ್ರೀಪುರುಷರ ಅನುಪಾತ ಸ್ತ್ರೀಯರಿಗೆ ಪ್ರತಿಕೂಲವಾಗಿದೆ. ಪ್ರತಿ 1000 ಪುರುಷರಿಗೆ 935 ಸ್ತ್ರೀಯರಿದ್ದಾರೆ. ಕೇರಳವೊಂದರಲ್ಲಿ ಮಾತ್ರ ಪ್ರತಿ 1000 ಪುರುಷರಿಗೆ 1033 ಸ್ತ್ರೀಯರಿದ್ದಾರೆ (ಕನಾಟಕದಲ್ಲಿ 963). ಪುರುಷರ ಸಂಖ್ಯೆಗೆ ಹೋಲಿಸಿದರೆ ಸ್ತ್ರೀಯರ ಸಂಖ್ಯೆ ಕಡಿಮೆ ಇರುವುದಕ್ಕೆ ಸ್ಪಷ್ಟಕಾರಣ ಗೋಚರವಾಗಿಲ್ಲ. ಭಾರತೀಯರು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳನ್ನು ಬಯಸುತ್ತಾರೆ. ಅವರ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಹೆಣ್ಣು ಮಕ್ಕಳನ್ನು ಕಡೆಗಣಿಸುತ್ತಾರೆ ಕೆಲವು ಕಾಯಿಲೆಗಳಿಂದ ಸ್ತ್ರೀಯರು ಸಾಮಾನ್ಯವಾಗಿ ಹೆಚ್ಚಾಗಿ ಮರಣಹೊಂದುತ್ತಾರೆ. ಪ್ರಸವಕಾಲದಲ್ಲಿ ಅನೇಕ ಸ್ತ್ರೀಯರು ಸಾವಿಗೆ ತುತ್ತಾಗುತ್ತಾರೆ. ಈ ಕಾರಣಗಳಿಂದಾಗಿ ಸ್ತ್ರೀ-ಪುರುಷರ ಸಂಖ್ಯೆಗಳಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಲಾಗಿದೆ.

ಸಾಕ್ಷರತೆ: 1981ರ ಜನಗಣಿತಿಯ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ಅಕ್ಷರಸ್ಥರು ಶೇಕಡಾ 36.17 ಅನಕ್ಷರಸ್ಥರಲ್ಲಿ 4 ವರ್ಷ ವಯಸ್ಸಿನ ತನಕದ ಮಕ್ಕಳೂ ಸೇರಿದ್ದಾರೆ. ಸ್ತ್ರೀಪುರುಷರಲ್ಲಿ ಸಾಕ್ಷರರ ಪ್ರಮಾಣ ಒಂದೇ ಸಮವಾಗಿಲ್ಲ. ಪುರುಷರಲ್ಲಿ ಶೇಕಡಾ 46.74 ಮತ್ತು ಸ್ತ್ರೀಯರಲ್ಲಿ ಶೇಕಡಾ 24.88 ಸಾಕ್ಷರರು. 1971-81ರ ಅವಧಿಯಲ್ಲಿ ಅಕ್ಷರಸ್ಥರ ಸಂಖ್ಯೆ ಶೇಕಡಾ 7ರಷ್ಟು ಹೆಚ್ಚಿದೆ. ಆದರೆ ಜನಸಂಖ್ಯೆ ಏರುತ್ತಿರುವುದರಿಂದ ಅನಕ್ಷರಸ್ಥರ ಸಂಖ್ಯೆಯೂ ಅಧಿಕವಾಗಿದೆ. ಅಕ್ಷರಸ್ಥರ ಸಂಖ್ಯೆ 8.2 ಕೋಟಿಯಷ್ಟು ಅಧಿಕವಾಗಿದ್ದರೆ ಅನಕ್ಷರಸ್ಥರ ಸಂಖ್ಯೆ 4.8 ಕೋಟಿಯಷ್ಟು ಏರಿದೆ. ಅತ್ಯಧಿಕ ಸಾಕ್ಷರತೆ ಕೇರಳದಲ್ಲಿ (69.17%), ಅತಿ ಕಡಿಮೆ ಅರುಣಾಚಲ ಪ್ರದೇಶದಲ್ಲಿ (20.09%) ಕರ್ನಾಟಕದ್ದು 18ನೆಯ ಸ್ಥಾನ (38.41%) 1901ರಲ್ಲಿ ಪ್ರತಿ 100 ಸ್ತ್ರೀ ಅಕ್ಷರಸ್ಥರಿಗೆ 1468 ಪುರುಷ ಅಕ್ಷರಸ್ಥರಿದ್ದರು. 1981ರಲ್ಲಿ ಪ್ರತಿ ಸ್ತ್ರೀ ಅಕ್ಷರಸ್ಥರಿಗೆ 201 ಪುರುಷ ಅಕ್ಷರಸ್ಥರಿದ್ದರು.

ಧರ್ಮಗಳು: ಭಾರತದಲ್ಲಿರುವ ಮುಖ್ಯ ಧರ್ಮಗಳು ಹಿಂದು, ಇಸ್ಲಾಮ್ ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಜರತುಷ್ಟ್ರ. ಕೊನೆಯ ಮೂರು ಧರ್ಮಗಳ ಅನುಯಾಯಿಗಳ ಸಂಖ್ಯೆ ಕಡಿಮೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ 45,32,92,086 (82.72%) ಹಿಂದುಗಳು. ಬಹುತೇಕ ಎಲ್ಲ ರಾಜ್ಯಗಳಲ್ಲೂ ಇವರು ಶೇಕಡಾ 60ಕ್ಕಿಂತ ಹೆಚ್ಚಾಗಿದ್ದಾರೆ. ಹಿಂದೂಗಳಲ್ಲೇ ಸೇರಿರುವ ಅನುಸೂಚಿತ ಜಾತಿ ಹಾಗೂ ಪಂಗಡದವರು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 21ರಷ್ಟಿದ್ದಾರೆ. (ಅನುಸೂಚಿತ ಜಾತಿಗಳು 14.63% ಪಂಗಡಗಳು 6.93%). ಅನುಸೂಚಿತ ಜಾತಿಗಳವರ ಸಂಖ್ಯೆ 7,99,95,896; ಪಂಗಡಗಳವರು 3,80,15,162. ಮುಸ್ಲಿಮರು 6,14,17,934 (11.21%), ಕ್ರೈಸ್ತರು 1,42,23,382 (2.60%) ಕ್ರೈಸ್ತರಲ್ಲಿ ಶೇಕಡಾ 60ರಷ್ಟು ಮಂದಿ ದಕ್ಷಿಣದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿದ್ದಾರೆ. ಸಿಖ್ಖರ ಸಂಖ್ಯೆ 1,03,78,797 (1.89%). ಅವರು ವಿಶೇಷವಾಗಿ ಪಂಜಾಬಿನಲ್ಲಿದ್ದಾರೆ. ಆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 60.22ರಷ್ಟು ಮಂದಿ ಸಿಖ್ಖರು. ಬೌದ್ಧರ ಸಂಖ್ಯೆ 38,12,315 (0.73%). ಇವರಲ್ಲಿ ಶೇಕಡಾ 85ರಷ್ಟು ಮಂದಿ ಇರುವುದು ಮಹಾರಾಷ್ಟ್ರದಲ್ಲಿ. ಆದರೂ ಆ ರಾಜ್ಯದ ಜನಸಂಖ್ಯೆಯಲ್ಲಿ ಅವರು ಕೇವಲ ಶೇಕಡಾ 6.47ರಷ್ಟು ಇದ್ದಾರೆ. ಅರುಣಾಚಲ ಪ್ರದೇಶದ ಜನಸಂಖ್ಯೆಯಲ್ಲಿ ಬೌದ್ಧ ಅನುಯಾಯಿಗಳು ಶೇಕಡಾ 13.3. ಜೈನರ ಸಂಖ್ಯೆ 26,04,646 (0.47%). ಅವರು ವಿಶೇಷವಾಗಿ ಪಶ್ಚಿಮದ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತುಗಳಲ್ಲಿದ್ದಾರೆ. ಜರತುಷ್ಟ್ರ ಮತೀಯರು 91,266. ಇವರ ಪೈಕಿ 72,266 ಮಂದಿ ಮುಂಬಯಿಯಲ್ಲಿದ್ದಾರೆ.

ಭಾಷೆಗಳು: 1961ರ ಜನಗಣತಿಯ ಪ್ರಕಾರ ಭಾರತದ ಜನರ ತಾಯಿ ನುಡಿಗಳಾಗಿರುವ ಭಾಷೆಗಳ ಸಂಖ್ಯೆ 1652. 1971ರ ಜನಗಣತಿಯೂ ಇದೇ ಪಟ್ಟಿಯನ್ನು ನೀಡಿದೆಯಾದರೂ ಈ ಬಗ್ಗೆ ಇನ್ನಷ್ಟು ಪರಿಶೀಲನೆ ಅಗತ್ಯವೆಂದು ಹೇಳಿದೆ. ಭಾರತದಲ್ಲಿರುವ ಅಗಾಧ ಸಂಖ್ಯೆಯ ಭಾಷೆಗಳಿಗೆ ಮುಖ್ಯ ಕಾರಣವೆಂದರೆ ಇದರ ವೈಶಾಲ್ಯ ಹಾಗೂ ಇಲ್ಲಿಗೆ ಬಂದು ನೆಲೆಸಿದ ನಾನಾ ಬುಡಕಟ್ಟುಗಳ ಜನ. ಭಾರತದ ಭಾಷೆಗಳು ನಾನಾ ಕುಟುಂಬಗಳಿಂದ ವಿಕಾಸಗೊಂಡಿವೆ. ಅವುಗಳ ಗುಂಪುಗಳು ಮುಖ್ಯವಾಗಿ ಆರು: ನಿಗ್ರಾಯಿಡ್, ಆಸ್ಟ್ರಿಕ್, ಸೈನೊಟಿಬೆಟನ್, ದ್ರಾವಿಡ, ಇಂಡೋ-ಆರ್ಯನ್, ಇತರ. ಇವು ಪರಸ್ಪರ ಪ್ರಭಾವ ಬೀರಿ ಆಧುನಿಕ ಭಾರತದ ಪ್ರಮುಖ ಭಾಷಾ ವಿಭಾಗಗಳಿಗೆ ಕಾರಣವಾಗಿವೆ. ಆರ್ಯ ಹಾಗೂ ದ್ರಾವಿಡ ಭಾಷಾ ಗುಂಪುಗಳು ಮುಖ್ಯವಾದುವು. ಇವು ಕೂಡ ಪರಸ್ಪರ ಪ್ರಭಾವ ಬೀರಿವೆ. ಜೊತೆಗೆ ಇತರ ಭಾಷೆಗಳ ಪ್ರಭಾವಗಳಿಗೂ ಒಳಗಾಗಿದೆ. 

ಭಾರತದ ಅತ್ಯಂತ ಪ್ರಾಚೀನ ನಿವಾಸಿಗಳಾದ ನಿಗ್ರಾಯಿಡರ ಭಾಷೆ ಈಗ ಪ್ರಧಾನವಾಗಿ ಅಂಡಮಾನ್ ದ್ವೀಪಗಳಲ್ಲಿ ಉಳಿದುಕೊಂಡಿದೆ. ಅದರ ಹೆಸರು ಅಂಡಮಾನೀ. ಇದನ್ನಾಡುವವರ ಸಂಖ್ಯೆ 1000.
ಭಾರತ-ಐರೋಪ್ಯ ಕುಟುಂಬದ ಭಾರತ ಶಾಖೆಯಾದ ಇಂಡೊ-ಆರ್ಯ ಭಾಷೆ ಆರ್ಯರೊಂದಿಗೆ ಭಾರತಕ್ಕೆ ಬಂದಿತು. ಭಾರತದ ಭಾಷಾ ಗುಂಪುಗಳ ಪಐಕಿ ಇದು ಅತ್ಯಂತ ದೊಡ್ಡದು. ಭಾರತದ ಜನಸಂಖ್ಯೆಯಲ್ಲಿ ಶೇಕಡಾ 74ರಷ್ಟು ಮಂದಿಯ ಭಾಷೆಗಳು ಈ ಗುಂಪಿನವು. ಇದರ ಪ್ರಮುಖ ಭಾಷೆಗಳಿವೆ: ಪಶ್ಚಿಮ ಪಂಜಾಬಿ, ಸಿಂಧಿ. ಪೂರ್ವಪಂಜಾಬಿ, ಹಿಂದಿ. ಪಂಜಾಬಿನ ಪೂರ್ವಕ್ಕೆ ಗುಜರಾತ್ ಮಹಾರಾಷ್ಟ್ರಗಳ ಉತ್ತರಕ್ಕೆ ಒರಿಸ್ಸ ಬಂಗಾಲಗಳ ಪೂರ್ವಕ್ಕೆ ಇರುವ ವಿಶಾಲ ಪ್ರದೇಶದಲ್ಲಿ ಪ್ರಚಲಿತವಿರುವ ಎಲ್ಲ ಭಾಷೆ ಹಾಗೂ ಆಡುನುಡಿಗಳನ್ನು ಹಿಂದಿಯೆಂದು ಸ್ಥೂಲವಾಗಿ ಕರೆಯಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಹಿಂದಿ ಇನ್ನೂ ಕಿರಿದಾದ ಪ್ರದೇಶದ ಭಾಷೆ. ಇದನ್ನು ಮತ್ತೆ ಎರಡು ಭಾಗಗಳಾಗಿ-ಪೂರ್ವ ಹಾಗೂ ಪಶ್ಚಿಮ ಹಿಂದಿ ಎಂದು ವಿಂಗಡಿಸಬಹುದು. ಪೂರ್ವ ಹಿಂದಿ ಅಥವಾ ಕೋಸಲಿಯಲ್ಲಿ ಮೂರು ಉಪಭಾಷೆಗಳಿವೆ: ಅವಧಿ ಅಥವಾ (ಬೈಶ್ವರಿ ಮಧ್ಯಯುಗದ ಕವಿ ತುಳಸಿದಾಸನ ಭಾಷೆ); ಬೇಘೇಲಿ, ಚತ್ತಿಸ್‍ಘರಿ, ಪಶ್ಚಿಮ ಹಿಂದಿ ಉಪಭಾಷೆಗಳಿವು: ಖಡೀಬೋಲೀ (ದೆಹಲಿ) ಬಂಗಾರು, ಬ್ರಜಭಾಷಾ, ಕನಾಜಿ, ಬುಂದೇಲಿ. ಹಿಂದಿ ಅಥವಾ ಹಿಂದೂಸ್ಥಾನಿಯಲ್ಲಿ ಎರಡು ಮಹಾಸಾಹಿತ್ಯಗಳಿವೆ. ಉರ್ದು ಮತ್ತು (ಉಚ್ಚ) ಹಿಂದಿ. ಎರಡರ ವ್ಯಾಕರಣವೂ ಒಂದೇ. ಅವುಗಳ ಮೂಲ ಶಬ್ದಭಂಡಾರವೂ ಒಂದೇ. ಲಿಪಿಯಲ್ಲಿ ಮಾತ್ರ ವ್ಯತ್ಯಾಸ. ಉರ್ದುವಿನದು ಪಾರಸಿ-ಅರಬ್ಬೀ ಲಿಪಿ. ಹಿಂದಿಯದು ನಾಗರೀ. ಹಿಂದಿಯಲ್ಲಿ ಭಾರತೀಯ ಪದಗಳಿಗೆ ಪ್ರಾಮುಖ್ಯ. ಉರ್ದುವಿನಲ್ಲಿ ಅರಬ್ಬೀ ಪಾರಸೀ ಶಬ್ದಗಳು ಹೆಚ್ಚು. ಬಿಹಾರಿ ಎಂಬುದು ಬಿಹಾರ ಮತ್ತು ಅದರ ಸುತ್ತ ಮುತ್ತ ಪ್ರಚಲಿತವಿರುವ ಮೂರು ಉಪಭಾಷೆಗಳಿಗೆ ನೀಡಿರುವ ಹೆಸರು. ಮೈಥಿಲಿ, ಮಾಗಧಿ, ಭೋಜಪುರಿ ಇವೇ ಆ ಉಪಭಾಷೆಗಳು. ಇವನ್ನಾಡುವವರ ಸಂಖ್ಯೆ 1.6 ಕೋಟಿ. ಬಿಹಾರದ ಅಧಿಕೃತಭಾಷೆ ಶಿಷ್ಟ ಖಡೀಬೋಲಿ ರೂಪದ ಹಿಂದಿ. ರಾಜಸ್ಥಾನಿ ಎಂಬುದು ರಾಜಸ್ಥಾನ ಮತ್ತು ಅದರ ಸುತ್ತಣ ಪ್ರದೇಶಗಳ ಭಾಷೆಗಳಿಗೆ ಗ್ರಿಯರ್‍ಸನ್ ನೀಡಿರುವ ಹೆಸರು. ಈ ಗುಂಪಿನ ಭಾಷೆಗಳು ಮಾರ್ವಾಡಿ, ಮಾಲ್ವಿ, ಧುಂದರಿ, ನಿಮಾದಿ, ಹರಾಂತಿ, ಬಂಜಾರಿ ಮಾರ್ವಾಡಿಯಲ್ಲಿ ಒಳ್ಳೆಯ ಸಾಹಿತ್ಯವುಂಟು. ಇದನ್ನು ಹಲವೇಳೆ ರಾಜಸ್ಥಾನಿಯೆಂದೇ ಕರೆಯಲಾಗಿದೆ. ರಾಜಸ್ಥಾನದ ಅಧಿಕೃತ ಭಾಷೆ ಹಿಂದಿ. ಗುಜರಾತಿನ ಅಧಿಕೃತ ಭಾಷೆ ಗುಜರಾತಿ. ಇದು ಪಶ್ಚಿಮ ಹಿಂದಿಯೊಂದಿಗೆ ಸಂಬಂಧ ಹೊಂದಿದೆ. ಇದರ ಸಾಹಿತ್ಯ ಚೆನ್ನಾಗಿ ಬೆಳೆದಿದೆ. ಮರಾಠಿ ಮಹಾರಾಷ್ಟ್ರದ ರಾಜಭಾಷೆ. 12ನೆಯ ಶತಮಾನದಷ್ಟು ಹಿಂದಿನದು. ಅಸ್ಸಾಮಿ ಅಸ್ಸಾಮ್ ರಾಜ್ಯದ ಭಾಷೆ. ಇದು ಆರ್ಯಮೂಲದ ಭಾಷೆಯಾದರೂ ಆಸ್ಟ್ರಿಕ್ ಮತ್ತು ಸೈನೊ-ಟಿಬೆಟನ್ ಪ್ರಭಾವಕ್ಕೆ ಒಳಗಾಗಿದೆ. ಬಂಗಾಲಿ-ಪಶ್ಚಿಮ ಬಂಗಾಲದ ಭಾಷೆ. ಒರಿಸ್ಸದ ಭಾಷೆ ಒರಿಯ. ಪಹಾಡಿ ಗುಂಪಿನವು ಹಿಮಾಲಯ ಪ್ರದೇಶದ ಉಪ ಭಾಷೆಗಳು. ಕಾಶ್ಮೀರಿ-ಇಂಡೊ-ಯೂರೋಪಿಯನ್ ಕುಟುಂಬದ ದಾರ್ದಿಕ್ ಶಾಖಾ ಭಾಷೆ. ಸಂಸ್ಕøತ ಭಾರತದ ಅಭಿಜಾತ ಭಾಷೆ.

ದ್ರಾವಿಡ ಕುಟುಂಬದ ಭಾಷೆಗಳು ಪ್ರತ್ಯೇಕ. ಆರ್ಯನ್, ಆಸ್ಟ್ರಿಕ್ ಅಥವಾ ಸೈನೋ-ಟಿಬೆಟಿಯನ್ ಭಾಷೆಗಳಿಗೆ ಭಾರತ ಉಪಖಂಡದ ಹೊರಗಿನ ಸಂಬಂಧವುಂಟು. ದ್ರಾವಿಡ ಭಾಷೆಗಳಿಗೆ ಇಲ್ಲ. ಇದು ಭಾರತದ ಎರಡನೆಯ ದೊಡ್ಡ ಭಾಷೆಗಳನ್ನಾಡುತ್ತಾರೆ. ಇಂಡೊ-ಆರ್ಯನ್ ಭಾಷೆಯ ಆಗಮನಕ್ಕೆ ಮುಂಚೆ ಭಾರತಕ್ಕೆ ಬಂದ ದ್ರಾವಿಡ ಭಾಷೆ ಮೂರು ಶಾಖೆಗಳಾಗಿ ಒಡೆಯಿತು. 1. ಉತ್ತರದ ಶಾಖೆ: ಬಲೂಚಿಸ್ತಾನದ ಬ್ರಾಹೂಯೀ, ಬಂಗಾಲ ಒರಿಸ್ಸಗಳ ಕುರುಖ್ ಮತ್ತು ಮಲೊ; 2. ಮಧ್ಯದ ಶಾಖೆ; ತೆಲುಗು ಮತ್ತು ಮಧ್ಯ ಭಾರತದ ಕುಯಿ, ಕುವಿ, ಕೊಲಾಮಿ, ಕೊಂಡ, ಗೋಡಿ, ನಾಯ್ಕಿ, ಪರ್ಜಿ, ಕೋಯ ಮುಂತಾದ ಉಪಭಾಷೆಗಳು; 3 ದಕ್ಷಿಣದ ಶಾಖೆ. ತಮಿಳು, ಕನ್ನಡ, ಮಲಯಾಳಮ್, ತುಳು, ಬಡಗ. ತೋಡ, ಕೋತ ಮತ್ತು ಕೊಡಗು. ದ್ರಾವಿಡ ಗುಂಪಿನ ಪ್ರಮುಖ ಭಾಷೆಗಳು ತಮಿಳು (ತಮಿಳುನಾಡು). ಕನ್ನಡ (ಕರ್ನಾಟಕ) ತೆಲುಗು (ಆಂಧ್ರ ಪ್ರದೇಶ) ಮತ್ತು ಮಲಯಾಳಮ್ (ಕೇರಳ).

ಆಸ್ಟ್ರೊ-ಎಷ್ಯಟಿಕ್ ಕುಟುಂಬದ ಭಾಷೆಗಳನ್ನಾಡುವವರು 60ಲಕ್ಷ (1.5%). ಇದರ ಭಾರತೀಯ ಶಾಖೆಗಳು ಎರಡು. ಮುಂಡ ಅಥವಾ ಕೋಲ್ (ಬಿಹಾರ, ಛೋಟಾನಾಗಪುರ, ಒರಿಸ್ಸಗಳ ಗುಡ್ಡಗಾಡುಜನರು); ಮಾಂಖ್‍ಮೇರ್‍ನಲ್ಲಿ ಈಶಾನ್ಯ ಭಾರತದ ಖಾಸಿ ಗುಂಪಿನ ಭಾಷೆಗಳೂ ನಿಕೊಬಾರ್ ದ್ವೀಪಗಳ ನಿಕೊಬಾರೀ ಭಾಷೆಯೂ ಸೇರಿವೆ. ಆಸ್ಟ್ರಿಕ್ ಭಾಷೆಗಳಿಗೆ ಲಿಪಿ ಯಾವಾಗಲೂ ಇದ್ದಿಲ್ಲ.

ಸೈನೊ-ಟಿಬೆಟನ್ ಕುಟುಂಬದ ಭಾಷೆಗಳು ಉತ್ತರ ಹಾಗೂ ಪೂರ್ವದಲ್ಲಿ ಹಬ್ಬಿವೆ, ಈ ಭಾಷೆಗಳನ್ನಾಡುವವರ ಸಂಖ್ಯೆ 30 ಲಕ್ಷ (0.73%). ಇದರ ಶಾಖೆಗಳು ಎರಡು. ಟಿಬೆಟೋ-ಚೈನೀ ಮತ್ತು ಟಿಬೆಟೋ-ಬರ್ಮೀ. ಟಿಬೆಟೋ-ಚೀನೀ ಗುಂಪಿನ ಭಾಷೆ ಭಾರತದಲ್ಲಿ ಒಂದೇ. ಅದು ಬಾಮ್ತಿ. ಟಿಬೆಟೊ-ಬರ್ಮೀ ಭಾಷೆಗಳು ಪ್ರಮುಖವಾಗಿ ಭೋಟಿಯ, ಬೋಡೊ, ನಾಗ, ಕುಕಿ-ಚಿನ್ ಮತ್ತು ಅಬೋರ್ ಗುಂಪುಗಳಾಗಿ ವಿಂಗಡವಾಗಿವೆ. ಮಣಿಪುರಿ ಮಣಿಪುರ ರಾಜ್ಯದ ಭಾಷೆ. ಉಳಿದವು ಮುಖ್ಯವಲ್ಲ.
ಇವಲ್ಲದೆ ಇನ್ನೂ ಭಾಷೆಗಳಿವೆ. ಮಧ್ಯ ಭಾರತದ ಆಡು ನುಡಿಯಾದ ನಹಾಲಿಯ ಮೂಲ ಗೊತ್ತಿಲ್ಲ. ಭಾರತಕ್ಕೆ ಬಂದು ನೆಲಸಿದ ಹಲವಾರು ಸಮುದಾಯಗಳ ಜನ ತಂತಮ್ಮವೇ ತಾಯಿನುಡಿಗಳನ್ನಾಡುತ್ತಾರೆ. ಪಾರ್ಸಿ, ಬೆನಿ ಇಸ್ರೆಲ್, ಯಹೂದಿ ಜನರ ಅರಬೀ. ಆದರೆ ಗುಜರಾತಿನಲ್ಲಿ ನೆಲಸಿದ ಪಾರಸಿಗಳು ಗುಜರಾತಿಯನ್ನೂ ಮಹಾರಾಷ್ಟ್ರ ನಿವಾಸಿ ಬೆನಿ ಇಸ್ರೇಲ್ ಯಹೂದ್ಯರು ಮರಾಠಿಯನ್ನೂ ಆಡುತ್ತಾರೆ.

ಭಾರತದ 1652 ತಾಯಿನುಡಿಗಳ ಪೈಕಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಆಡುವ ಭಾಷೆಗಳು 33. ಆ ಭಾಷೆಗಳ ಹೆಸರುಗಳಿವು: ಹಿಂದಿ, ತೆಲುಗು, ಬಂಗಾಲಿ, ಮರಾಠೀ, ತಮಿಳು, ಉರ್ದು, ಗುಜರಾತಿ, ಮಲಯಾಲಮ್, ಕನ್ನಡ ಒರಿಯ, ಭೋಜಪುರಿ, ಪಂಜಾಬಿ, ಅಸ್ಸಾಮೀ, ಛತಿಸ್‍ಘಡೀ, ಮಾಗಧೀ, ಮೈಥಿಲೀ, ಮಾರ್ವಾರೀ, ಸಂತಾಲಿ, ಕಾಶ್ಮೀರಿ, ರಾಜಸ್ಥಾನಿ, ಗೊಂಡಿ, ಕೊಂಕಣಿ, ಡೋಗ್ರಿ, ಗೋರ್ಖಲಿ (ನೇಪಾಲಿ), ಘರ್‍ವಾಲಿ,  ಪಹಾರಿ, ಭಿಲಿ, ಕುರುಖ್, ಕುಮೌನಿ, ಸಿಂದಿ, ಲಂಬಾಡಿ, ತುಳು, ಬಾಗ್ರಿ.

ಭಾರತದ ಎಲ್ಲ ಜನರೂ ಅರಿಯಬಲ್ಲ ಸಾಮಾನ್ಯ ಭಾಷೆ ಇರಲಿಲ್ಲ. ಒಂದು ಕಾಲದಲ್ಲಿ ಸಂಸ್ಕøತ ಭಾರತದ ಎಲ್ಲ ಭಾಗಗಳ ವಿದ್ವಾಂಸರ ಭಾಷೆಯಾಗಿತ್ತು. ಬ್ರಿಟಿಷರ ಆಡಳಿತ ಕಾಲದಲ್ಲಿ ಇಂಗ್ಲೀಷ್ ಆಡಳಿತಭಾಷೆಯಾಗಿತ್ತು. ಆದರೆ ಅದು ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಭಾರತಕ್ಕೊಂದು ಸಾರ್ವತ್ರಿಕ ಭಾಷೆಯ ಪ್ರಶ್ನೆ ಸಂವಿಧಾನ ರಚನಾ ಸಭೆಯ ಮುಂದೆ ಬಂದಿತ್ತು. ಈ ಬಗ್ಗೆ ಸರ್ವಾನುಮತ ದೊರಕಲಿಲ್ಲ. ಹಿಂದಿಯ ಪರವಾಗಿ ಹಾಗೂ ವಿರೋಧವದಾಗಿ ಸಮವಾಗಿ ಮತಗಳು ಬಂದವು. ಸಭಾಧ್ಯಕ್ಷರ ನಿರ್ಧಾರಕ ಮತದಿಂದಷ್ಟೇ ಅದು ಜಯಗಳಿಸಿತು. ಪ್ರಾದೇಶೀಕ ಭಾಷೆಯೊಂದಕ್ಕೆ ಒಕ್ಕೂಟದ ಅಧಿಕೃತ ಭಾಷೆಯಾಗುವ ಅವಕಾಶ ದೊರಕಿತು. ಪ್ರಾದೇಶಿಕ ಭಾಷೆಗಳು ಅಯಾ ರಾಜ್ಯಗಳ ಅಧಿಕೃತ ಭಾಷೆಗಳಾಗಲೂ ಸಂವಿಧಾನದಲ್ಲಿ ಉಪಬಂಧ ಮಾಡಲಾಯಿತು. ಇಂಗ್ಲಿಷ್ ಅಧಿಕೃತ ವೈಧಾನಿಕ ಹಾಗೂ ನ್ಯಾಯಿಕ ಭಾಷೆಯಾಗಿ ಮುಂದುವರಿಯಿತು. ಅದು ಹಿಂದಿಯ ಸಹ ಭಾಷೆಯಾಯಿತು. ಈಗಲೂ ಇಂಗ್ಲಿಷ್ ಹೆಚ್ಚುಕಡಿಮೆ ಅ ಸ್ಥಾನದಲ್ಲಿ ಮುಂದುವರಿದಿದೆ. ರಾಜ್ಯಗಳ ಪುನರ್ವಿಂಗಡಣೆಯಾದ ಮೇಲೆ (1956) ಪ್ರಾದೇಶಿಕ ಭಾಷೆಗಳ ಮಹತ್ತ್ವ ಹೆಚ್ಚುತ್ತಿದೆಯಾದರೂ ಅವಕ್ಕಿನ್ನು ಯುಕ್ತವಾದ ಸ್ಥಾನಮಾನಗಳು ದೊರಕಿಸುವಲ್ಲಿ ತೊಡಕುಗಳನ್ನು ಎದುರಿಸಲಾಗುತ್ತಿದೆ. ಹಿಂದಿ ಎಲ್ಲ ರಾಜ್ಯಗಳ ಜನರ ಮನಸ್ಸುಗಳನ್ನು ಒಲಿಸಿ ಕೊಳ್ಳುವುದರಲ್ಲಿ ಯಶಸ್ಸುಗಳಿಸಿಲ್ಲ. ಅದು ಒಂದು ಪ್ರಾದೇಶಿಕ ಭಾಷೆಯೆಂಬ, ಸಂವಿಧಾನ ರಚನಾ ಸಂಸ್ಥೆಯ ಅರ್ಧದಷ್ಟು ಜನಕ್ಕೆ ಅದರ ಪರವಾಗಿ ಮತನೀಡಲಿಲ್ಲವೆಂಬ, ಆ ಭಾಷೆಯನ್ನಾಡದ ಜನಕ್ಕೆ ಮೂಲತಃ ಕೆಲವು ಪ್ರತಿಕೂಲಗಳುಂಟಾಗಬಹುದೆಂಬ ಕಾರಣಗಳಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ.

ಎಲ್ಲ ಪ್ರಾದೇಶೀಕ ಭಾಷೆಗಳೂ ಶಾಸನದ ಮಾನ್ಯತೆ ಪಡೆದಿವೆಯೆಂಬುದನ್ನು ಸ್ಪಷ್ಟಪಡಿಸಲು ಸಂವಿಧಾನದ 8ನೆಯ ಅನುಸೂಚಿಯಲ್ಲಿ ಪ್ರಮುಖ ಭಾಷೆಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಇದರಲ್ಲಿರುವ ಭಾಷೆಗಳು ಅಸ್ಸಾಮಿ, ಬಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಲಮ್, ಮರಾಠೀ, ಒರಿಯ, ಪಂಜಾಬಿ, ಸಂಸ್ಕøತ, ತಮಿಳು, ತೆಲುಗು, ಉರ್ದು, ಸಿಂಧಿ ಈ ಪಟ್ಟಿಯಲ್ಲಿ ಇಂಗ್ಲಿಷ್, ಸಂಸ್ಕøತ, ಉರ್ದು, ಸಿಂಧಿಗಳೂ ಸೇರಿವೆ. ಇವು ಯಾವ ಪ್ರದೇಶದ ಭಾಷೆಗಳೂ ಅಲ್ಲ. ಪ್ರಾದೇಶಿಕ ಭಾಷೆಗಳು ಆಯಾ ರಾಜ್ಯಗಳ ಅಧಿಕೃತ ಭಾಷೆಗಳು.

	ಜನವಸತಿ ವಿನ್ಯಾಸ: ದೇಶದ ಶೇಕಡಾ ಸುಮಾರು 80ರಷ್ಟು ಜನ ಗ್ರಾಮವಾಸಿಗಳು. ಕೈಗಾರಿಕೆಯ ಬೆಳೆವಣಿಗೆಯಿಂದ ನಗರಗಳೂ ಪಟ್ಟಣಗಳೂ ಬೆಳೆಯುತ್ತಿವೆ. ದೇಶದಲ್ಲಿ 2900ಕ್ಕೂ ಹೆಚ್ಚು ಪಟ್ಟಣಗಳೂ 5,67,000ಕ್ಕೂ ಹೆಚ್ಚು ಜನವಸತಿಯ ಹಳ್ಳಿಗಳೂ ಇವೆ. ತಲಾ ಒಂದು ಲಕ್ಷಕ್ಕೂ ಮೀರಿ ಜನಸಂಖ್ಯೆಯ ಪಟ್ಟಣಗಳು 150ಕ್ಕೂ ಹೆಚ್ಚಾಗಿವೆ. 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳು ಒಂಬತ್ತು: ಕಲ್ಕತ್ತ, ಮುಂಬಯಿ, ದೆಹಲಿ, ಮದರಾಸು, ಹೈದರಾಬಾದ್, ಅಹಮದಾಬಾದ್, ಬೆಂಗಳೂರು, ಕಾನ್ಪುರ ಮತ್ತು ಪುಣೆ.

	ಸಾರಿಗೆ: ಭಾರತದ ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ಹೊಣೆ. ರಾಜ್ಯ ಹೆದ್ದಾರಿಗಳನ್ನೂ ಜಿಲ್ಲಾ ಹಾಗೂ ಗ್ರಾಮಾಂತರ ರಸ್ತೆಗಳನ್ನೂ ನಿರ್ಮಿಸಿ ದುರಸ್ತಿಯಲ್ಲಿಡುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ. ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ರಸ್ತೆಗಳು ಮುಖ್ಯ ಕೊಂಡಿಗಳಾಗಿದ್ದರೆ ಅಥವಾ ಆಯಕಟ್ಟಿನ ಮತಹ್ತ್ವ ಉಳ್ಳವಾಗಿದ್ದರೆ ಅವುಗಳ ನಿರ್ಮಾಣದಲ್ಲಿ ಕೇಂದ್ರ ಸರ್ಕಾರವೂ ಭಾಗವಹಿಸಬಹುದು. ರಾಷ್ಟ್ರೀಯ ಹೆದ್ದಾರಿಗಳ ಉದ್ದ ಸುಮಾರು 24,000 ಕಿಮೀ. ಸುಮಾರು 215 ಭಾರಿ ಸೇತುವೆಗಳಿವೆ. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಇವು: ಕಲ್ಕತ್ತಾ-ಅಮೃತಸÀರ ಗ್ರಾಂಡ್‍ಟ್ರಂಕ್ ರಸ್ತೆ (ವಾರಾಣಸಿ, ಕಾನ್ಪುರ, ಅಗ್ರ-ದೆಹಲಿ ಮೂಲಕ), ಅಗ್ರ-ಮುಂಬಯಿ ರಸ್ತೆ, ಮುಂಬಯಿ-ಬೆಂಗಳೂರು-ಮದರಾಸು ರಸ್ತೆ, ಮದರಾಸ್-ಕಲ್ಕತ್ತ ರಸ್ತೆ, ಕಲ್ಕತ್ತ-ನಾಗಪುರ-ಮುಂಬಯಿ ರಸ್ತೆ. ಒಟ್ಟು 13 ರಾಷ್ಟ್ರೀಯ ಹೆದ್ದಾರಿಗಳಿವೆ. ಇವಲ್ಲದೆ ಐದು ಎಕ್ಸ್‍ಪ್ರಸ್ ಹೆದ್ದಾರಿಗಳು ವೇಗದ ಮೋಟಾರ್ ಸಂಚಾರಕ್ಕಾಗಿ ಇವೆ. ಎರಡು ಮುಂಬಯಿ ಹೊರವಲಯದಲ್ಲಿವೆ. ಇನ್ನೊಂದು ಕಲ್ಕತ್ತ-ಡಂಡಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ. ಭಾರತದಲ್ಲಿ ಪ್ರಪಂಚದಲ್ಲೇ ಉನ್ನತವಾದ ರಸ್ತೆಯಿದೆ; ಹಿಮಾಚಲಪ್ರದೇಶದ ಕುಲು ಕಣಿವೆಯಲ್ಲಿರುವ ಮನಾಲಿಯಿಂದ ಜಮ್ಮು ಕಾಶ್ಮೀರದ ಲಡಾಖ್‍ವರೆಗಿನ ರಸ್ತೆ. ಇದರ ಸರಾಸರಿ ಎತ್ತರ 4270 ಮೀ. ಇದು 4880-5490 ಮೀ ಎತ್ತರದ ನಾಲ್ಕು ಉನ್ನತ ಘಾಟುಗಳ ಮೂಲಕ ಹಾದು ಹೋಗುತ್ತದೆ.

	ಸ್ವತಂತ್ರ ಭಾರತದ ರೈಲ್ವೆಗಳನ್ನು ಆರು ವಲಯಗಳಲ್ಲಿ ವಿಂಗಡಿಸಲಾಗಿತ್ತು. ಅವು ಮಧ್ಯ, ಪೂರ್ವ, ಉತ್ತರ, ಈಶಾನ್ಯ, ಪಶ್ಚಿಮ, ದಕ್ಷಿಣ, ಇವಲ್ಲದೆ ಇನ್ನೂ ಮೂರು ಚಿಕ್ಕ ವಲಯಗಳಿವೆ: ಆಗ್ನೇಯ, ಈಶಾನ್ಯ ಗಡಿ ಮತ್ತು ದಕ್ಷಿಣ ಮಧ್ಯ. 

	ಭಾರತದ ರೈಲ್ವೆಗಳು ಕೇಂದ್ರದ ರೈಲ್ವೆ ಮಂತ್ರಾಲಯದ ನೇರ ಹೊಣೆ. ಇದಕ್ಕೆ ನೆರವು ನೀಡಲು ರೈಲ್ವೆ ಬೋರ್ಡ್ ಇದೆ. ಉಗಿಯಂತ್ರ ಮತ್ತು ಗಾಡಿಗಳ ತಯಾರಿಕೆಯಲ್ಲಿ ಭಾರತ ಸ್ವಯಂಪೂರ್ಣವಾಗಿದೆ. ಚಿತ್ತರಂಜನ್ ಲೋಕೊಮೋಟಿವ್ ಕಾರ್ಖಾನೆ (ಪಶ್ಚಿಮ ಬಂಗಾಲ). ಇಂಟೆಗ್ರಲ್ ಕೋಚ್ ಕಾರ್ಖಾನೆ (ಮದ್ರಾಸ್), ಡೀಸೆಲ್ ಲೋಕೊಮೋಟಿವ್ ಕಾರ್ಖಾನೆ (ವಾರಾಣಸಿ) ಇವನ್ನು ಉತ್ಪಾದಿಸುತ್ತವೆ. ಭಾರತ ರೈಲುಗಾಡಿಗಳನ್ನೂ ಎಂಜಿನ್‍ಗಳನ್ನೂ ಮಾಲು ಬಂಡಿಗಳನ್ನೂ ರಫ್ತು ಮಾಡುತ್ತದೆ.

	ಹಡಗು ಸಾರಿಗೆ ಮುಖ್ಯವಾಗಿ ಹಡಗು ಮತ್ತು ಸಾರಿಗೆ ಮಂತ್ರಾಲಯದ ಹೊಣೆಯಾದರೂ ವಾಣಿಜ್ಯ, ಕೈಗಾರಿಕೆ ಮತ್ತು ರಕ್ಷಣಾ ಮಂತ್ರಾಲಯಗಳೂ ಇದರಲ್ಲಿ ಆಸಕ್ತಿ ವಹಿಸಿವೆ. ನೀತಿಯ ವಿಚಾರದಲ್ಲಿ ಸಲಹೆ ನೀಡಲು ರಾಷ್ಟ್ರೀಯ ಹಡಗು ಸಾರಿಗೆ ಮಂಡಲಿ ಎಂಬ ಪರಿನಿಯತ ನಿಕಾಯದ ಸ್ಥಾಪನೆಯಾಗಿದೆ. ಸರ್ಕಾರಿವಲಯದ ಹಡಗು ಸಾರಿಗೆ ನಿಗಮ ಅತ್ಯಂತ ದೊಡ್ಡ ಹಡಗು ಸಂಸ್ಥೆ. ಖಾಸಗಿ ವಲಯದಲ್ಲಿ ಸಿಂಧಿಯಾ ದೊಡ್ಡದು. ಸರ್ಕಾರಿ ವಲಯದ ಎರಡು ಹಡಗು ನಿರ್ಮಾಣ ಅಂಗಣಗಳಿವೆ: ವಿಶಾಖಪಟ್ಟಣದ ಹಿಂದೂಸ್ಥಾನ್ ಷಿಪ್‍ಯಾರ್ಡ್ ಮತ್ತು ಮುಂಬಯಿಯ ಮಜಗಾಂವ್ ಡಾಕ್. ಮೂರನೆಯದೊಂದು ಕೊಚ್ಚಿಯಲ್ಲಿ ನಿರ್ಮಾಣವಾಗಿದೆ.

	ಭಾರತದಲ್ಲಿ ಪ್ರಮುಖ ಬಂದರುಗಳಿವು: ಕಲ್ಲತ್ತ, ಪಾರದೀಪ್ (ಒರಿಸ್ಸ), ವಿಶಾಖಪಟ್ಟಣ, ಮದರಾಸ್, ಕಾಂಡ್ಲ (ಗುಜರಾತ್), ಮುಂಬಯಿ, ಮಾರ್ಮಗೋವ (ಗೋವ), ಕೊಚ್ಚಿ. ಇವುಗಳ ಆಡಳಿತಕ್ಕೆ ಪರಿನಿಯತ ನ್ಯಾಸಮಂಡಲಿಗಳಿವೆ. ಇವಲ್ಲದೆ ಎರಡು ಸರ್ವಋತು ಬಂದರುಗಳು ಮಂಗಳೂರು ಮತ್ತು ಟ್ಯೂಟಿಕಾರಿನ್‍ನಲ್ಲಿವೆ. ಕಲ್ಕತ್ತಾ ಬಳಿಯ ಹಾಲ್ಡಿಯದಲ್ಲಿ ಹೊಸ ಬಂದರುಕಟ್ಟೆಯ ನಿರ್ಮಾಣವಾಗಿದೆ. ಭಾರತದ ಪ್ರಮುಖ ಬಂದರುಗಳು ವಾರ್ಷಿಕವಾಗಿ 6 ಕೋಟಿ ಟನ್ ಸರಕು ನಿರ್ವಹಿಸುತ್ತವೆ. ಕರಾವಳಿಯಲ್ಲಿ 225 ಮಧ್ಯಮ ಹಾಗೂ ಸಣ್ಣ ಬಂದರುಗಳಿವೆ. ಇವುಗಳ ಪೈಕಿ 150 ಬಳಕೆಯಲ್ಲಿವೆ. ಇವು ಕರಾವಳಿಯ ಹಾಗೂ ಹೊರನಾಡಿನ 90 ಲಕ್ಷ ಟನ್ ಸರಕು ನಿರ್ವಹಿಸುತ್ತವೆ. ಈ ಬಂದರುಗಳ ನಿರ್ವಹಣೆ ರಾಜ್ಯ ಸರ್ಕಾರಗಳ ಹೊಣೆ. ಬಂದರು ಅಭಿವೃದ್ಧಿ ಕಾರ್ಯದ ಸಂಯೋಜನೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲು ರಾಷ್ಟ್ರೀಯ ರೇವು ಮಂಡಲಿಯಿದೆ. ಮರ್ಚೆಂಟ್ ನೇವಿ ತರಬೇತಿ ಮಂಡಲಿ ತರಬೇತಿ ನೀಡುತ್ತದೆ. ಕಡಲು ಸಾರಿಗೆ ಶುಲ್ಕ ಆಯೋಗ ಕಡಲು ಸಾರಿಗೆ ಶುಲ್ಕ ಆಯೋಗ ಕಡಲು ಸಾರಿಗೆ ಶುಲ್ಕದ ಬಗ್ಗೆ ಸಲಹೆ ನೀಡುತ್ತದೆ.

	ವಾಯುಸಾರಿಗೆಗೆ ಎರಡು ಸರ್ಕಾರಿ ನಿಗಮಗಳಿವೆ: ಇಂಡಿಯನ್ ಏರ್‍ಲೈನ್ಸ್ ಮತ್ತು ಏರ್ ಇಂಡಿಯ. ಇವಲ್ಲದೆ 20 ವಿಮಾನ ಹಾರಾಟ ಸಂಘಗಳೂ 10 ವಿಮಾನ ಸಾರಿಗೆ ಕಂಪನಿಗಳೂ ಇವೆ. ಈ ಕಂಪನಿಗಳು ವೇಳಾಪಟ್ಟಿ ಬಿಟ್ಟು ಒಪ್ಪಂದದಂತೆ ವಿಮಾನ ಹಾರಿಸಲು ಪರವಾನೆ ಪಡೆದಿವೆ. ಮುಂಬಯಿ, ದೆಹಲಿ, ಮದ್ರಾಸ್, ಮತ್ತು ಕಲ್ಕತ್ತ ಅಂತಾರಾಷ್ಷ್ರೀಯ ವಿಮಾನ ನಿಲ್ದಾಣಗಳು. ಪ್ರಮುಖ ನಿಲ್ದಾಣಗಳು ಅಹಮದಾಬಾದ್, ನಾಗಪುರ, ಅಗರ್ತಲಾ, ಗುವಾಹಾತಿ, ಬೆಂಗಳೂರು ಇತ್ಯಾದಿ.

	ಆರ್ಥಿಕ ಭೂವಿವರಣೆ. ಖನಿಜ ಸಂಪತ್ತು: ಭಾರತದ ಖನಿಜ ಸಂಪತ್ತು ಗಮನಾರ್ಹವಾದ್ದು, ವೈವಿಧ್ಯಮಯವಾದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಅನುಕೂಲಕರವಾದ್ದು. ಕಬ್ಬಿಣದ ಅದುರು, ಅಲ್ಯೂಮಿನಿಯಮ್ ಅದುರು, ಟೈಟಾನಿಯಮ್, ಮ್ಯಾಂಗನೀಸ್, ಅಭ್ರಕ ಯಥೇಚ್ಛವಾಗಿವೆ. ಭಾರತದ ಖನಿಜ ನಿಕ್ಷೇಪಗಳು ಬಹುತೇಕ ಅದಿ ಭೂಯುಗ ಕಾಲದ್ದು. ಪರ್ಯಾಯ ದ್ವೀಪೀಯ ಪ್ರಸ್ಥಭೂಮಿ ಶಿಲಾಸಂಬಂಧದವು. ಖನಿಜಗಳ ಪ್ರಸರಣ ಅಸಮ. ಬಿಹಾರ, ಒರಿಸ್ಸಗಳ ಖನಿಜ ನಿಕ್ಷೇಪಗಳು ಅಪಾರ. ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ವಿರಳ. ವಿವಿಧ ರಾಜ್ಯಗಳ ಖನಿಜ ನಿಕ್ಷೇಪಗಳು ಈ ರೀತಿ ಇವೆ:
ರಾಜ್ಯ

ಮುಖ್ಯ ಖನಿಜಗಳು

ಅಸ್ಸಾಮ್
. . .
ಪೆಟ್ರೋಲಿಯಮ್

ಆಂಧ್ರ ಪ್ರದೇಶ
. . .
ಕಲ್ಲಿದ್ದಲು, ಅಭ್ರಕ

ಉತ್ತರ ಪ್ರದೇಶ
. . .
-

ಒರಿಸ್ಸಾ
. . .
ಕಬ್ಬಿಣ, ಮ್ಯಾಂಗನೀಸ್

ಕರ್ನಾಟಕ
. . .
ಚಿನ್ನ, ಕಬ್ಬಿಣ, ಮ್ಯಾಂಗನೀಸ್

ಕೇರಳ
. . .
ಇಲ್ಮೆನೈಟ್

ಗುಜರಾತ್
. . .
ಬಾಕ್ಸೈಟ್, ಪಟ್ರೋಲಿಯಮ್

ಜಮ್ಮು-ಕಾಶ್ಮೀರ
. . .
-

ತಮಿಳುನಾಡು
. . .
ಇಲ್ಮೆನೈಟ್, ಸುಣ್ಣಕಲ್ಲು

ಪಂಜಾಬ್
. . .

ಪಶ್ಚಿಮ ಬಂಗಾಳ
. . .
ಕಲ್ಲಿದ್ದಲು

ಬಿಹಾರ
. . .
ಬಾಕ್ಸೈಟ್, ಕಲ್ಲಿದ್ದಲು,

ಕಬ್ಬಿಣ, ಅಭ್ರಕ

ಮಧ್ಯಪ್ರದೇಶ
. . .
ಬಾಕ್ಸೈಟ್, ಕಲ್ಲಿದ್ದಲು,

ಕಬ್ಬಿಣ ಮ್ಯಾಂಗನೀಸ್

ಮಹಾರಾಷ್ಟ್ರ
. . .
ಬಾಕ್ಸೈಟ್, ಮ್ಯಾಂಗನೀಸ್

ರಾಜಸ್ಥಾನ
. . .
ಅಭ್ರಕ

ಭಾರತದ ಕಬ್ಬಿಣ ಅದುರು ನಿಕ್ಷೇಪಗಳು 2000 ಕೋಟಿ ಟನ್. ಇದು ಪ್ರಪಂಚದ ಒಟ್ಟು ನಿಕ್ಷೇಪಗಳ ಶೇಕಡಾ 22. ಹೆಮಟೈಟ್, ಮ್ಯಾಗ್ನೆಸೈಟ್ ಮುಖ್ಯ ಬಗೆಗಳು. ಜೊತೆಗೆ ಮ್ಯಾಂಗನೀಸ್ ನಿಕ್ಷೇಪಗಳು ಸುಮಾರು 2.5 ಕೋಟಿ ಟನ್ ಇವೆ. ಭಾರತ ಅಭ್ರಕದಲ್ಲಿ ಪ್ರಥಮ. ಈ ನಿಕ್ಷೇಪಗಳು ಉತ್ತಮ ಗುಣಮಟ್ಟದವು. ಬಾಕ್ಸೈಟ್‍ನ ಒಟ್ಟು ನಿಕ್ಷೇಪಗಳು 25 ಕೋಟಿ ಟನ್. ಉತ್ತಮ ದರ್ಜೆಯ ಕಲ್ಲಿದ್ದಲು 600 ಕೋಟಿ ಟನ್ ಇದೆ. ಪಟ್ರೋಲಿಯಮ್ ನಿಕ್ಷೇಪಗಳ ಸರ್ವೇಕ್ಷಣ ಕಾರ್ಯ ವ್ಯಾಪಕವಾಗಿ ನಡೆದಿದೆ. ಕಡಲಾಳದ ನಿಕ್ಷೇಪಗಳು ವಿಶೇಷವಾಗಿ ಫಲಕೊಡಲಾರಂಭಿಸಿವೆ. ನದೀಮುಖಜ ಭೂಮಿಗಳಲ್ಲಿ ಹಾಗೂ ಗುಜರಾತ್ ಅಸ್ಸಾಮ್‍ಗಳಲ್ಲಿ ನಿಕ್ಷೇಪಗಳ ಉತ್ಪಾದನೆ ಅಧಿಕಗೊಂಡಿದೆ. ಮುಂಬಯಿ, ಕೋವಲಿ (ಗುಜರಾತ್), ಬತಾನಿ (ಬಿಹಾರ), ನುನ್ಮತಿ (ಅಸ್ಸಾಮ್) ಮತ್ತು ವಿಶಾಖಪಟ್ಟಣಗಳಲ್ಲಿ ತೈಲಸಂಸ್ಕರಣ ಕೇಂದ್ರಗಳಿವೆ. ಖನಿಜ ಕೈಗಾರಿಕೆ ಮುಖ್ಯವಾಗಿ ಸರ್ಕಾರಿವಲಯದಲ್ಲಿದೆ. ಸರ್ವೇಕ್ಷಣದ ಹೊಣೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣದ್ದು. ಪಟ್ರೋಲಿಯಮ್ ಸರ್ವೇಕ್ಷಣ ಹಾಗೂ ಕೈಗಾರಿಕಾಭಿವೃದ್ಧಿಯ ಹೊಣೆ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ್ದು. ಅಲ್ಯೂಮಿನಿಯಮ್ ಕೈಗಾರಿಕೆ ತಕ್ಕಮಟ್ಟಿಗೆ ಬೆಳೆದಿದೆ. ತಾಮ್ರ ಮತ್ತು ಸತುವು ಸಂಪನ್ಮೂಲಗಳ ಅಭಿವೃದ್ಧಿಯ ಯತ್ನವೂ ನಡೆದಿದೆ. ಆದರೆ ಪ್ರಗತಿ ನಿಧಾನ. 						(ಎಚ್.ಎಸ್.ಕೆ.)

	ಭಾರತದ ಅಭ್ರಕ ನಿಕ್ಷೇಪಗಳು: ಪ್ರಪಂಚದ ಅಭ್ರಕದ ಅಗತ್ಯದಲ್ಲಿ 80% ರಷ್ಟು ಭಾಗ ಭಾರತದಲ್ಲಿ ಉತ್ಪತ್ತಿ ಆಗುತ್ತದೆ. ವಾರ್ಷಿಕವಾಗಿ 30.000 ಮೆಟ್ರಿಕ್ ಟನ್ನುಗಳಿಗೂ ಹೆಚ್ಚು ಕಚ್ಚಾ ಅಭ್ರಕ ಹೊರತೆಗೆಯಲಾಗುತ್ತಿದೆ. ಇದರಲ್ಲಿ 60% ಭಾಗ ಬಿಹಾರಿನಿಂದಲೂ ತಲಾ 20% ಭಾಗ ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳಿಂದಲೂ ಬರುತ್ತಿವೆ.

	ಅಲ್ಯೂಮಿನಿಯಮ್ಮಿನ ಅರ್ಥೊಸಿಲಿಕೇಟುಗಳು ಪ್ರಧಾನವಾಗಿದ್ದು ಜೊತೆಗೆ ಪೊಟ್ಯಾಸಿಯಮ್, ಹೈಡ್ರೊಜನ್ ಮತ್ತು ಸಾಮಾನ್ಯವಾಗಿ ಮೆಗ್ನೀಸಿಯಮ್ ಹಾಗೂ ಫೆರಸ್ ಕಬ್ಬಿಣ ಕೂಡಿಕೊಂಡಿರುವ ಒಂದು ಸಮ್ಮಿಶ್ರ ಲೋಹಗಳ ಗುಂಪಿಗೆ ಸೇರಿರುವ ಖನಿಜವೇ ಅಭ್ರಕ (ಮೈಕ). ಫೆರ್ರಿಕ ಕಬ್ಬಿಣ, ವೆನೇಡಿಯಮ್, ಸೋಡಿಯಮ್ ಮತ್ತು ಲೀತಿಯಮ್ ಇವೂ ಕೆಲವೊಮ್ಮೆ ಅಭ್ರಕದಲ್ಲಿ ಇರುವುದುಂಟು. ವ್ಯಾಪಾರ ದೃಷ್ಟಿಯಲ್ಲಿ ಮುಖ್ಯವೆನಿಸಿರುವ ಅಭ್ರಕದ ಪ್ರಭೇದಗಳು : 1 ಮಸ್ ಕೊವೈಟ್ (ಶ್ವೇತಾಭ್ರಕ ಅಥವಾ ಪೊಟಾಷ್ ಅಭ್ರಕ) 2 ಫ್ಲೋಗೊಪೈಟ್ (ಅಂಬರ್ ಅಭ್ರಕ ಅಥವಾ ಮೆಗ್ನೀಸಿಯಮ್ ಅಭ್ರಕ), 3 ಬಯೊಟೈಟ್ (ಕಪ್ಪು ಅಭ್ರಕ ಅಥವಾ ಮೆಗ್ನೀಸಿಯಮ್-ಕಬ್ಬಿಣ ಅಭ್ರಕ), 4 ಲಿಪಿಕೊಲೈಟ್ (ಲೀತಿಯಮ್ ಅಭ್ರಕ), 5 ಜಿóನ್‍ವಾಲ್‍ಡೈಟ್ (ಲೀತಿಯಮ್-ಕಬ್ಬಿಣ ಅಭ್ರಕ), 6 ರಾಸ್‍ಕೊಲೈಟ್ (ವೆನೇಡಿಯಮ್ ಅಭ್ರಕ). ಕೊನೆಯ ಮೂರು ತೀರ ಅಪೂರ್ವ ಪ್ರಭೇದಗಳು. ವ್ಯಾಪಾರಕ್ಕೆ ಬೇಕಾದ ಇತರ ಅಭ್ರಕಗಳು ಮಸ್‍ಕೊವೈಟ್, ಫ್ಲೋಗೊನೈಟ್ ಮತ್ತು ಇವುಗಳಷ್ಟು ಅಧಿಕವಾಗಿ ಅಲ್ಲದಿದ್ದರೂ ಕೆಲವೊಮ್ಮೆ ಬೇಕಾಗುವ ಬಯೊಟೈಟ್ ಇವು ಮುಖ್ಯವಾಗಿ ತಮ್ಮ ಭೌತಗುಣಗಳಿಂದ ಕೈಗಾರಿಕೆಗಳಿಗೆ ಬಲು ಉಪಯುಕ್ತವಾಗಿವೆ.

	ಭಾರತದ ಎಲ್ಲ ರಾಜ್ಯಗಳಲ್ಲೂ ಅಭ್ರಕ ದೊರೆಯುತ್ತದೆ. ಆಂಧ್ರಪ್ರದೇಶದ ನೆಲ್ಲೂರು, ಕೃಷ್ಣ, ಕಡಪ ಮತ್ತು ವಿಶಾಖಪಟ್ಟಣ ಜಿಲ್ಲೆಗಳು; ಬಂಗಾಲದ ಬಂಕೂರ, ಮಿಡ್ನಾಪುರ ಮತ್ತು ಪರುಲಿಯಾ ಜಿಲ್ಲೆಗಳು; ಬಿಹಾರದ ಭಾರಲ್‍ಪುರ, ಗಯಾ, ಹಜಾರಿಬಾಗ್, ಮಾಂಘೀರ್, ಧನ್‍ಬಾದ್, ಪಲಮಾವು, ರಾಂಚಿ ಮತ್ತು ಸಿಂಘ ಭೂಮ್ ಜಿಲ್ಲೆಗಳು; ಗುಜರಾತಿನ ಛೋಟಾ ಉದಯಪುರ ಜಿಲ್ಲೆ; ಜಮ್ಮು ಮತ್ತು ಕಾಶ್ಮೀರದ ಸೋಂಜಾನ್ ಪ್ರದೇಶ, ದೋಡಾ ಜಿಲ್ಲೆ; ಮಧ್ಯಪ್ರದೇಶದ ಬಾಲಘಾಟ್ ಬಸ್ತಾರ್, ಬಿಲಾಸ್‍ಪುರ್, ಛಿಂದವಾರ, ಗ್ವಾಲಿಯರ್, ಝಬುವ ಮತ್ತು ರೀವಾ ಜಿಲ್ಲೆಗಳು; ತಮಿಳುನಾಡಿನ ಕೊಯಮತ್ತೂರು, ನೀಲಗಿರಿ ಮತ್ತು ಸೇಲವ ಜಿಲ್ಲೆಗಳು; ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ; ಕರ್ನಾಟಕದ ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳು; ಕೇರಳದ ಕ್ವಿಲಾನ್ ಜಿಲ್ಲೆ; ಒರಿಸ್ಸಾದ ಗಂಜಾಮ್, ಕೋರಾಪುಟ್, ಮಯುರ್ ಭಂಜ್, ಸಾಂಬಲ್‍ಪುರ, ಸುಂದಘರ್, ಜಿಲ್ಲೆಗಳು; ಪಂಜಾಬಿನ ಕಾಂಗ್ರಾ ಮತ್ತು ಪಾಟಿಯಾಲಾ ಜಿಲ್ಲೆಗಳು ಮತ್ತು ರಾಜಸ್ಥಾನದ ಅಳ್ವಾರ್, ಅಜ್ಮೀರ್, ಭರತಪುರ, ಭಿಲ್ಟಾ, ಜಯಪುರ, ಜೋಧಪುರ, ಕಿಷನಘರ, ಷಹಾಪುರ, ಟೋನಂಕ, ಮತ್ತು ಉದಯಪುರ ಜಿಲ್ಲೆಗಳು-ಇಲ್ಲೆಲ್ಲ ಅಭ್ರಕ ನಿಕ್ಷೇಪಗಳಿವೆ. ಈ ನಿಕ್ಷೇಪಗಳಲ್ಲಿ ಫ್ಲೋಟ್‍ಗೊಪೈಟು ಕೇರಳದ ಕ್ವಿಲಾನ್ ಜಿಲ್ಲೆ, ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆ ಮತ್ತು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗಳಿಗೆ ಮಾತ್ರ ಸೀಮಿತಗೊಂಡಿವೆ. ಇತರ ನಿಕ್ಷೇಪಗಳಲ್ಲಿ ಮಸ್‍ಕೊವೈಟ್ ಅಭ್ರಕ ಎಂಬ ಪ್ರಭೇದ ಲಭ್ಯ.

	ಬಿಹಾರ, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ಅಭ್ರಕ ವಲಯಗಳಲ್ಲಿ ಮಸ್‍ಕೊವೈಟ್ ಅಭ್ರಕ ದೊರೆಯುತ್ತದೆ. ಬಿಹಾರ ಅಭ್ರಕ ವಲಯ ಸುಮಾರು 30 ಕಿಮೀ. ಅಗಲವಾಗಿ ಪೂರ್ವ ಈಶಾನ್ಯದಿಂದ ಪಶ್ಚಿಮ ನೈತುತ್ಯದ ದಿಕ್ಕಿನಲ್ಲಿ ಗಯಾದಿಂದ ಹಜಾರಿಬಾಗ್ ಮತ್ತು ಮಾಘೀರ್ ಜಿಲ್ಲೆಗಳನ್ನು ಹಾಯ್ದು ಭಾಗಲ್‍ಪುರದ ಜಿಲ್ಲೆಯವರೆಗೆ ಸುಮಾರು 135 ಕಿಮೀ ಪ್ರದೇಶದಲ್ಲಿ ಹಬ್ಬಿದೆ. ಈ ವಲಯದಲ್ಲಿ ಕೊಡರ್ಮ ಮೀಸಲು ಅರಣ್ಯ ಅತಿ ಮುಖ್ಯ ಉತ್ಪತ್ತಿಸ್ಥಾನ. ಪೆಗ್ಮಟೈಟ್ ಶಿಲೆಗಳ ದಪ್ಪ ಸುಮಾರು 30 ಮೀ ವರೆಗೆ ಹೋಗುತ್ತದೆ. ಇವುಗಳ ಪೈಕಿ ಅನೇಕ ಶಿಲಾಪ್ರಸ್ತರಗಳಲ್ಲಿ ತೋಡಿ ತೆಗೆಯಬಹುದಾದ ಅಭ್ರಕ ಪ್ರಸ್ತರಗಳು ಇವೆ ಮತ್ತು ಸುಮಾರು 153 ಮೀ ಆಳದವರೆಗೆ ಇವನ್ನು ತೋಡಿದ್ದಾರೆ. ಇಲ್ಲಿಯ ಅಭ್ರಕ ಬಹಳ ಶ್ರೇಷ್ಠವಾದದ್ದು-ಇದು ಕೆಂಪುಹರಳಿನಂಥ ಕೆಂಬಣ್ಣದ ಮಾದರಿಯದು. ಸಾಮಾನ್ಯವಾಗಿ ನಿರ್ಮಲ, ಕಲೆ ಮತ್ತು ಸುಕ್ಕು ಇರುವುದಿಲ್ಲ. ಇತರ ದೋಷಗಳಿಂದ ಮುಕ್ತ ಪ್ರಪಂಚದಲ್ಲೇ ಅತಿ ಶ್ರೇಷ್ಠವೂ ಸಂಪನ್ನವೂ ಅದ ಮಸ್‍ಕೊವೈಟ್ ಅಭ್ರಕದ ನಿಕ್ಷೇಪಗಳು ಬಿಹಾರಿನಲ್ಲಿವೆ. ರಾಜಸ್ಥಾನದ ಅಭ್ರಕಯುಕ್ತ ಪೆಗ್ಮಟೈಟುಗಳು ಸುಮಾರು 90 ಕಿಮೀ ಅಗಲಕ್ಕೆ ಜಯಪುರದ ಈಶಾನ್ಯ ಭಾಗದಿಂದ ಉದಯಪುರದ ನೈರುತ್ಯ ಭಾಗದವರೆಗೆ, ಸುಮಾರು 300 ಕಿಮೀ ಪ್ರದೇಶದಲ್ಲಿ ಹಬ್ಬಿವೆ. ರಾಜಸ್ಥಾನದ ಅಭ್ರಕಗಳು ಬಲುಮಟ್ಟಿಗೆ ಕೆಂಪು ಮತ್ತು ಪಚ್ಚೆ ಬಣ್ಣಗಳಿಂದ ಕೂಡಿರುವುವು. ಇವನ್ನು ಭಿಲ್‍ವಾರ, ಟೋಂಕ, ಅಜ್ಮೀರ್, ಜಯಪುರ ಮತ್ತು ಉದಯಪುರದ ಜಿಲ್ಲೆಗಳಲ್ಲಿ ವಿಶೇಷವಾಗಿ ತೆಗೆಯುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಅಭ್ರಕ ವಲಯ ಗುಡೂರಿನಿಂದ ಸಂಗಮದವರೆಗೆ ಸುಮಾರು 90 ಕಿಲೊಮೀಟರುಗಳಷ್ಟು ದೂರಕ್ಕೆ ವ್ಯಾಪಿಸಿದೆ. ಇದರ ಅಗಲ ಸುಮಾರು 12 ಕಿಮೀಗಳಿಂದ 15 ಕಿಮೀದವೆರೆಗೆ ಇದರಲ್ಲಿ ದೊರೆಯುವ ಮಸ್‍ಕೊವೈಟಿನ ಅಧಿಕ ಭಾಗ ಹೆಚ್ಚಾಗಿದೆ ಮತ್ತು ವರ್ಣಯುಕ್ತ. ಕೆಂಪು ಅಭ್ರಕವೂ ಇದರೊಂದಿಗೆ ಇರುತ್ತದೆ.

	ಭಾರತದಲ್ಲಿ ಲೆಪಿಡೊಲೈಟ್ ಎಂಬ ಅಭ್ರಕ ಬಿಹಾರಿನ ಅಭ್ರಕ ಕ್ಷೇತ್ರದ ಕೆಲವು ಅಭ್ರಕವಾಹೀ ಪೆಗ್ಮಟೈಟುಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಜಾರಿಬಾಗ್ ಜಿಲ್ಲೆಯ ಪಿಹ್ರದ ಹತ್ತಿರ ಸಿಕ್ಕುತ್ತದೆ. ಅಲ್ಲದೇ ಇದು ರಾಜಸ್ಥಾನದ ಜೋಧಪುರ ಜಿಲ್ಲೆಯ ಕೆಲವು ಗ್ರಾನೇಟ್ ಪೋರ್‍ಫಿರೀಸುಗಳಲ್ಲಿಯೂ (ಬೆಣಚು ಕಲ್ಲಿನ ಪದರಗಟ್ಟದ ಅಗ್ನಿಶಿಲೆ) ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆಯ ಮುಂಡವಾಲ್ ಕ್ಷೇತ್ರದಲ್ಲಿ ಪೆಗ್ಮಟೈಟಿನಲ್ಲಿಯೂ ದೊರೆಯುತ್ತದೆ. ಕೊನೆಯದಂತೂ ಅತ್ಯುತ್ತಮ ಬಗೆಯ ನಿಕ್ಷೇಪ. ಲೋಹರೂಪದ ಲೀತಿಯಮ್ಮಿನ ಉತ್ಪತ್ತಿಯಲ್ಲಿ ಲಿಪಿಡೊಲೈಟನ್ನು ಪ್ರಮುಖವಾಗಿ ಉಪಯೋಗಿಸುತ್ತಾರೆ. ಬಿಹಾರದ ಕೆಂಪು ಅಭ್ರಕವನ್ನು ಶುಭ್ರ, ಸ್ವಲ್ಪ ರಂಗಿನದು, ತುಂಬ ರಂಗಿನದು ಎಂದು ಮೂರು ಬಗೆಗಳಲ್ಲಿ ವರ್ಗೀಕರಿಸುತ್ತಾರೆ. ನೆಲ್ಲೂರಿನ ಪಚ್ಚೆ ಅಭ್ರಕವನ್ನು ಶುದ್ಧ ಹಸುರು, ಕಲೆಗಳುಳ್ಳ ಹಸುರು ಮತ್ತು ಹಳದಿ-ಹಸುರು ಎಂಬುದಾಗಿ ವಿಂಗಡಿಸುತ್ತಾರೆ. ಗಟ್ಟಿಯಾಗಿ, ಒಂದೇ ಸಮವಾದ ಬಣ್ಣವುಳ್ಳದ್ದಾಗಿ, ಚಪ್ಪಟೆಗಾಗಿ ಮತ್ತು ಯಾವ ಕಲೆಯೂ ಇಲ್ಲದ ಅಭ್ರಕ ಅತ್ಯಂತ ಶ್ರೇಷ್ಠ. ಬಿಹಾರದ ಸ್ಥಳೀಯ ಕಲಾನಿಷ್ಣಾತ ಕೆಲಸಗಾರರು ಹರಿತವಾಗಿರುವ ಮೊನಚಾದ ಚಾಕುವಿನಿಂದ ಅಭ್ರಕ ಸೀಳುವ ಕೆಲಸವನ್ನು ನಡೆಸುತ್ತಾರೆ. ಪ್ರಪಂಚದ ಎಷ್ಟೊ ದೇಶಗಳು ತಮ್ಮ ಅಭ್ರಕವನ್ನು ಈ ಕೆಲಸಕ್ಕಾಗಿ ಭಾರತಕ್ಕೆ ರವಾನಿಸುತ್ತವೆ. 

			(ಕೆ.ಎಸ್.ವಿ.ಆರ್.)

	ಕೈಗಾರಿಕೆ: 1950 ಮತ್ತು 1960ರ ದಶಕಗಳಲ್ಲಿ ಅನೇಕ ಕೈಗಾರಿಕೆಗಳು ಬೆಳೆದುವು. ಆದರೆ ಅನುಭೋಗ ಕೈಗಾರಿಕೆಗಳೇ ಪ್ರಮುಖವಾಗಿದ್ದುವು. ಹತ್ತಿ, ಜವಳಿ, ಚಹಾ, ಸಕ್ಕರೆ, ಔಷಧಿ ಮುಖ್ಯವಾದವು. ಬಂಡವಾಳ ಸರಕು ಕೈಗಾರಿಕೆಗಳ ಉತ್ಪಾದನೆಯ ಹತ್ತನೆಯ ಒಂದರಷ್ಟು ಮಾತ್ರವಿತ್ತು. ರೈಲ್ವೆಸಲಕರಣೆ ಮತ್ತು ವಾಹನಗಳು ಮುಖ್ಯವಾಗಿದ್ದುವು. 1970ರ ವೇಳೆಗೆ ಭಾರತದಲ್ಲಿ ಸಂಕೀರ್ಣ ಕೈಗಾರಿಕಾ ವ್ಯವಸ್ಥೆ ಬೆಳೆದಿತ್ತು. ಉಕ್ಕು, ಯಂತ್ರಸಲಕರಣೆ ರಸಗೊಬ್ಬರ, ಸಿಮೆಂಟ್ ಅಲ್ಯೂಮಿನಿಯಮ್ ವಸ್ತುಗಳು, ಕೈಗಾರಿಕಾಯಂತ್ರ ಮತ್ತು ಬಿಡಿ ಭಾಗಗಳು, ವಿದ್ಯುತ್ ಮತ್ತು ಸಾರಿಗೆ ಸಲಕರಣೆ ಮುಖ್ಯ ಕೈಗಾರಿಕೆಗಳು. ಶೇಕಡಾ 80ರಷ್ಟು ಬಂಡವಾಲ ನಿಯೋಜನೆ ಉಕ್ಕು ಎಂಜನಿಯರಿಂಗ್ ಕೈಗಾರಿಕೆ, ರಸಗೊಬ್ಬರ ಪೆಟ್ರೋಲಿಯಮ್ ಗಣಿ ಮತ್ತು ಖನಿಜ ಕೈಗಾರಿಕೆಗಳಲ್ಲಿ ಸರ್ಕಾರಿವಲಯದ ಉತ್ಪಾದನೆ ಒಟ್ಟು ಉತ್ಪಾದನೆಯ ಹತ್ತನೆಯ ಒಂದರಷ್ಟು.

ಶಕ್ತಿ: ಶಕ್ತಿ ಮೂಲಗಳು ಸಾಕಷ್ಟಿವೆಯಾದರೂ ಯಥೇಚ್ಛವಲ್ಲ. ಹಿಮಾಲಯ ಮತ್ತು ಚಿಕ್ಕ ಪರ್ವತ ಶ್ರೇಣಿಗಳಲ್ಲಿ ಸುಮಾರು 8-10 ಲಕ್ಷ ಕಿವಾ ವಾಣಿಜ್ಯಕ ಜಲವಿದ್ಯುತ್ ವಿಭವ ಇದೆಯೆಂದು ಅಂದಾಜು ಮಾಡಲಾಗಿದೆ. ಕಲ್ಲಿದ್ದಲು ಲಭ್ಯತೆ ಧಾರಾಳ. ಆದರೆ ಅದು ಬಹುತೇಕ ಬಿಹಾರ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿವೆ. ಕಚ್ಚಾತೈಲ ಅಭಿವೃದ್ದಿಯಾಗುತ್ತಿದೆ. ಜಲವಿದ್ಯುತ್ತಿನ ಜೊತೆಗೆ ಉಷ್ಣವಿದ್ಯುತ್ ಹಾಗೂ ಪರಮಾಣು ವಿದ್ಯುತ್ ಕೇಂದ್ರಗಳೂ ಸ್ಥಾಪಿತವಾಗುತ್ತಿವೆ. ಭಾರತದ ಪ್ರಥಮ ಪರಮಾಣು ವಿದ್ಯುತ್ ಕೇಂದ್ರ ತಾರಾಪುರದಲ್ಲಿ (ಮುಂಬಯಿ) ಸ್ಥಾಪಿತವಾಯಿತು (1969). ಎರಡನೆಯದು ರಾಣಾಪ್ರತಾಪ್ ನಗರದ್ದು (ರಾಜಸ್ಥಾನ). ಕಲ್ಪಾಕಮ್‍ನಲ್ಲಿ ಇನ್ನೊಂದು ಸ್ಥಾಪಿತವಾಗಿ ಕಾರ್ಯಾರಂಭ ಮಾಡಿದೆ. ಇತರೆಡೆಗಳಲ್ಲೂ ಇವು ಸ್ಥಾಪಿತವಾಗುತ್ತಿವೆ. ಭಾರತದ ವಿದ್ಯುತ್ ಜಾಲಗಳು ಪ್ರಾದೇಶಿಕ. ರಾಷ್ಟೀಯ ಜಾಲದ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಆಗಾಗ ಪ್ರಾದೇಶಿಕವಾಗಿ ರೇವು ಅಭಾವಗಳು ಸಂಭವಿಸುತ್ತವೆ.

ಕೃಷಿ: ಕೃಷಿ ಅರಣ್ಯಗಾರಿಕೆ ಹಾಗೂ ಮೀನುಗಾರಿಕೆಗಳ ಪಾಲು ಭಾರತದ ಸ್ಥೂಲ ರಾಷ್ಟ್ರೀಯ ಉತ್ಪನ್ನದಲ್ಲಿ ಅರ್ಧದಷ್ಟು. ಒಟ್ಟು ಕೃಷಿ ಉತ್ಪನ್ನದಲ್ಲಿ ಮೂರನೆಯ ಎರಡುಪಾಲು ಆಹಾರಧಾನ್ಯ. ಬತ್ತ ಪ್ರಮುಖ ಆಹಾರ ಧಾನ್ಯ. ಎರಡನೆಯ ಸ್ಥಾನ ಗೋದಿಗೆ. ಇತರ ಧಾನ್ಯಗಳು ಜೋಳ, ಬಾಜ್ರ, ರಾಗಿ, ಬಾರ್ಲಿ, ಧಾನ್ಯೇತರ ಬೆಳೆಗಳು ಎಣ್ಣೆಬೀಜ, ಕಬ್ಬು, ಹತ್ತಿ, ಸಣಬು, ಚಹಾ, ಕಾಫಿ, ರಬ್ಬರ್, ಹೊಗೆಸೊಪ್ಪು, ಭಾರತದ ಕೃಷಿ ಬಹುತೇಕ ಹಳೆಯ ಪದ್ಧತಿಯಲ್ಲಿ ನಡೆಯುತ್ತಿದೆ. ಮಳೆಗೆ ಅನುಗುಣವಾಗಿ ಬೆಳೆ ಏರಿಳಿಯುತ್ತದೆ. ಒಟ್ಟು ಸಾಗುವಳಿ ನೆಲದಲ್ಲಿ ಕಾಲು ಭಾಗಮಾತ್ರ ನೀರಾವರಿಗೆ ಒಳಪಟ್ಟಿದೆ. ಮೂರನೆಯ ಎರೆಡರಷ್ಟು ನೆಲಕ್ಕೆ ಅಂತರ್ಜಲ ಹಾಗೂ ಮೇಲ್ಮೈ ಜಲ ಮೂಲಗಳಿಂದ ನೀರಾವರಿ ವಿಸ್ತರಿಸಬಹುದು. ತಲಾ ಐದು ಎಕರೆಗಳಿಗಿಂತ ಕಡಿಮೆ ನೆಲ ಹೊಂದಿರುವವರು ಒಟ್ಟು ನೆಲದೊಡೆಯರಲ್ಲಿ ಶೇಕಡಾ 52. ಹಸುರು ಕ್ರಾಂತಿ ಬಹುತೇಕ ನೀರಾವರಿ ನೆಲಕ್ಕೆ ಸೀಮಿತವಾಗಿದೆ.
ಮೀನುಗಾರಿಕೆ ಅಭಿವೃದ್ಧಿಗೆ ವಿಶೇಷ ಅವಕಾಶವುಂಟು. ಭಾರತಕ್ಕೆ ಉದ್ದವಾದ ಕರಾವಳಿಯಿದೆ. ಹಲವು ನದಿಗಳಲ್ಲಿ ಮೀನುಗಳಿವೆ. ಭಾರತದ ಮೀನು ಉತ್ಪಾದನೆ ವರ್ಷಕ್ಕೆ ಸುಮಾರು 15 ಲಕ್ಷ ಟನ್. ಮೀನುಗಾರಿಕೆಯನ್ನು ಯಾಂತ್ರೀಕರಿಸಲು ಸಾಕಷ್ಟು ಯತ್ನ ನಡೆದಿದೆ.

ಭಾರತದ ಶೇಕಡಾ 19ರಷ್ಟು ಪ್ರದೇಶ ಅರಣ್ಯಾವೃತ. ಆದರೆ ಭಾರತದ ದೇಶೀಯ ಉತ್ಪನ್ನಕ್ಕೆ ಅರಣ್ಯಗಳ ಕೊಡುಗೆ ಕೇವಲ ಶೇಕಡಾ 1ರಷ್ಟು ಮಾತ್ರ. ಭಾರತದ ಅರಣ್ಯ ಸಂಪತ್ತು ತೀವ್ರ ಶೋಷಣೆಗೆ ಒಳಗಾಗುತ್ತಿದೆ.

ಸಂವಿಧಾನ, ಅಡಳಿತ, ಸಾಮಾಜಿಕ ಸ್ಥಿತಿಗತಿ, ಸಾಂಸ್ಕøತಿಕ ಜೀವನ: ಸಂವಿಧಾನ: ಭಾರತ ಸಾರ್ವಭೌಮ ಸಮಾಜವಾದಿ ಧರ್ಮದಿರಪೇಕ್ಷ ಜನತಂತ್ರಾತ್ಮಕ ಗಣರಾಜ್ಯ, 1950 ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂತು. ಇದು ಪ್ರಪಂಚದ ಅತ್ಯಂತ ಉದ್ದವಾದ ಲಿಖಿತ ಸಂವಿಧಾನ. ಭಾರತದ ಸಂವಿಧಾನ ಹಲವು ಎಡೆಗಳಿಂದ ಸ್ಫೂರ್ತಿ ಪಡೆದಿದೆ. ಅದರೆ ಮುಖ್ಯ ಸ್ಪೂರ್ತಿ ಬ್ರಿಟನ್ನಿನ ಸಂಸದೀಯ ಪ್ರಭುತ್ವ ಪರಿಕಲ್ಪನೆಯಿಂದ ಬಂದದ್ದು. ಒಕ್ಕೂಟ ಹಾಗೂ ಏಕತ್ಮಕ ಎರಡೂ ವ್ಯವಸ್ಥೆಗಳ ಸಮನ್ವಯ ಭಾರತದ ಸಂವಿಧಾನ. ಸಂವಿಧಾನದಲ್ಲಿ ಎಲ್ಲ ಪೌರರಿಗೂ ಕೆಲವು ಮೂಲಭೂತ ಹಕ್ಕುಗಳು ದತ್ತವಾಗಿವೆ: ಸಮತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಮತೀಯ ಸ್ವಾತಂತ್ರ್ಯದ ಹಕ್ಕು, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕುಗಳು, ಆಸ್ತಿಯ ಹಕ್ಕು, ಸಂವೈಧಾನಿಕ ಪರಿಹಾರಗಳ ಹಕ್ಕು, ರಾಜ್ಯ ನೀತಿಯ ನಿರ್ದೇಶವಿದೆ. ಎಲ್ಲರಿಗೂ ಸಾಧಿಸಬೇಕಾದ ಹಲವಾರು ತತ್ತ್ವಗಳ ನಿರ್ದೇಶವಿದೆ. ಎಲ್ಲರಿಗೂ ಸಮಾನಾವಕಾಶವೇ ಮುಂತಾದ ಗುರಿಗಳನ್ನು ಇಲ್ಲಿ ನಿರ್ದೇಶಿಸಲಾಗಿದೆ.

ರಾಷ್ಟ್ರಪತಿ ಭಾರತದ ಕಾರ್ಯಾಂಗದ ಮುಖ್ಯ, ಸಶಸ್ತ್ರ ಬಲಗಳ ಮಹಾದಂಡನಾಯಕ, ಉಭಯ ಸಂಸತ್ ಸದನಗಳ ಚುನಾಯಿತ ಸದಸ್ಯರ ಹಾಗೂ ರಾಜ್ಯಗಳ ವಿಧಾನ ಸಭಾ ಸದಸ್ಯರ ಚುನಾವಣಾ ಮಂಡಲದಿಂದ ರಾಷ್ಟ್ರಪತಿಯ ಆಯ್ಕೆಯಾಗುತ್ತದೆ. ಅವರ ಅಧಿಕಾರಾವಧಿ ಐದು ವರ್ಷ, ಸಂಸತ್ತಿನ ಉಭಯ ಸದನಗಳಿಂದ ಉಪರಾಷ್ಟ್ರಪತಿಯ ಅಯ್ಕೆ. ಉಪರಾಷ್ಟ್ರಪತಿ ರಾಜ್ಯ ಸಭೆಯ (ಸಂಸತ್ತಿನ ಮೇಲ್ಮನೆ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

ರಾಷ್ಟ್ರಪತಿಗೆ ನೆರವು ಹಾಗೂ ಸಲಹೆ ನೀಡಲು ಮಂತ್ರಿಮಂಡಲವಿದೆ. ಪ್ರಧಾನ ಮಂತ್ರಿಯನ್ನು ನೇಮಿಸುವವರು ರಾಷ್ಟ್ರಪತಿ. ಪ್ರಧಾನಿಯ ಸಲಹೆಯ ಮೇರೆಗೆ ಅವರು ಇತರರನ್ನು ನೇಮಿಸುತ್ತಾರೆ. ಭಾರತ ಒಕ್ಕೂಟದ ಸಂಸತ್ತಿನಲ್ಲಿ ಎರಡು ಸದನಗಳಿವೆ: ರಾಜ್ಯಸಭೆ, ಲೋಕಸಭೆ. ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಪ್ರತಿನಿಧಿಗಳು ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರು. ಜೊತೆಗೆ ರಾಷ್ಟ್ರಪತಿ ನೇಮಕಮಾಡಿದವರು (12 ಮಂದಿ) ಇರುತ್ತಾರೆ. ರಾಜ್ಯ ಸಭೆಯ ಸದಸ್ಯರಲ್ಲಿ ಮೂರನೆಯ ಒಂದರಷ್ಟು ಮಂದಿ ಸರದಿಯಂತೆ ಪ್ರತಿ ಆರು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಮತ್ತೆ ಆ ಸ್ಥಾನಗಳ ಭರ್ತಿ ಆಗುತ್ತದೆ. ಲೋಕಸಭೆಯ ಅವಧಿ 5 ವರ್ಷ. ಸಂಸತ್ತಿಗೆ ಚರ್ಚೆಗಳಲ್ಲಿ ಸಹಾಯ ನೀಡಲು ಈ ಮುಂದಿನ ಸಮಿತಿಗಳನ್ನು ನೇಮಕಮಾಡಲಾಗುತ್ತದೆ: ಸಾರ್ವಜನಿಕ ಲೆಕ್ಕ ಸಮಿತಿ, ಅಂದಾಜು ಸಮಿತಿ, ಸರ್ಕಾರಿ ಉದ್ಯಮಗಳ ಸಮಿತಿ, ಸರ್ಕಾರದ ಭರವಸೆಗಳನ್ನು ಕುರಿತ ಸಮಿತಿ. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ಶಾಸನಾಂಗಕ್ಕೆ ಕಾರ್ಯಾಂಗ ಅಧೀನವಾಗಿರುತ್ತದೆ. ನ್ಯಾಯಾಂಗ ಸ್ವತಂತ್ರವಾಗಿ ಕೆಲಸ ಮಾಡುತ್ತದೆ. ಪ್ರಧಾನಮಂತ್ರಿ ಲೋಕಸಭೆಯ ಬಹುಮತ ಪಕ್ಷದ ನಾಯಕನಾಗಿರುತ್ತಾನೆ.

ರಾಜ್ಯಗಳಲ್ಲೂ ಇದೇ ಬಗೆಯ ವ್ಯವಸ್ಥೆ ಇದೆ. ಅದರೆ ರಾಷ್ಟ್ರಪತಿಯಿಂದ ನೇಮಕರಾದ ರಾಜ್ಯಪಾಲರು ಮುಖ್ಯರು. ವಿಧಾನಸಭೆಯ ಬಹುಮತ ಪಕ್ಷದ ನಾಯಕ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುತ್ತಾನೆ. ಇತರ ಮಂತ್ರಿಗಳು ಮುಖ್ಯಮಂತ್ರಿಯ ಸಲಹೆ ಮೇರೆಗೆ ನೇಮಕವಾಗುತ್ತಾನೆ. ವಿಧಾನಸಭೆಯ ಅವಧಿ ಐದು ವರ್ಷ, ಕೆಲವು ರಾಜ್ಯಗಳಲ್ಲಿ ಮೇಲ್ಮನೆಗಳಿರುತ್ತದೆ (ವಿಧಾನ ಪರಿಷತ್), ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶಗಳಲ್ಲಿ ಮೇಲ್ಮನೆಗಳಿವೆ.

ಭಾರತದ ಸರ್ವೋಚ್ಚ ನ್ಯಾಯಲಯದಲ್ಲಿ ಮುಖ್ಯ ನ್ಯಾಯಮೂರ್ತಿಯೂ ಹಲವರು ನ್ಯಾಯಮೂರ್ತಿಗಳೂ ಇರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕ ರಾಷ್ಟ್ರಪತಿಯಿಂದ, ಮುಖ್ಯ ನ್ಯಾಯಮೂರ್ತಿಯೊಂದಿಗೆ ಸಮಾಲೋಚನೆ ನಡೆಸಿ ನೇಮಕಮಾಡಲಾಗುತ್ತದೆ. ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65. ಸರ್ವೋಚ್ಚ ನ್ಯಾಯಾಲಯಕ್ಕೆ ಮೂಲ ಹಾಗೂ ಮೇಲ್ಮನವಿ ಎರಡೂ ವಿಚಾರಣೆ ನಡೆಸುವ ಅಧಿಕಾರವುಂಟು.

ಪ್ರತಿಯೊಂದು ರಾಜ್ಯಕ್ಕೂ ಒಂದು ಮುಖ್ಯ ನ್ಯಾಯಾಲಯವಿದೆ. ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳನ್ನು ಇದು ಒಳಗೊಂಡಿರುತ್ತದೆ. ಇವರ ನೇಮಕ ರಾಷ್ಟ್ರಪತಿಯಿಂದ. ಇವುಗಳ ಕೆಳಗೆ ಅಧೀನ ನ್ಯಾಯಾಲಯಗಳಿವೆ.

ಭಾರತದ ರಾಜ್ಯಗಳು ಹಾಗೂ ಅವುಗಳ ರಾಜಧಾನಿಗಳು ಹೀಗಿವೆ : ಅಂಧ್ರಪ್ರದೇಶ (ಹೈದರಾಬಾದ್), ಅಸ್ಸಾಮ್ (ಗುವಾಹಾತಿ), ಬಿಹಾರ (ಪಾಟ್ನ). ಗುಜರಾತ್ (ಗಾಂಧಿನಗರ), ಹರಿಯಾನಾ (ಚಂಡೀಗಢ), ಹಿಮಾಚಲ ಪ್ರದೇಶ (ಸಿಮ್ಲಾ), ಕೇರಳ (ತ್ರಿವೇಂದ್ರಮ್), ಕರ್ನಾಟಕ (ಬೆಂಗಳೂರು), ಮಧ್ಯಪ್ರದೇಶ (ಭೋಪಾಲ), ತಮಿಳುನಾಡು (ಮದರಾಸು), ಮಹಾರಾಷ್ಟ್ರ (ಮುಂಬಯಿ), ಮಣಿಪುರ (ಇಂಫಾಲ್), ಮೇಘಾಲಯ (ಷಿಲಾಂಗ್), ನಾಗಾಲ್ಯಾಂಡ್ (ಕೊಹಿಮಾ), ಒರಿಸ್ಸ (ಭುವನೇಶ್ವರ), ಪಂಚಾಬ್ (ಚಂಡೀಗಢ), ರಾಜಸ್ತಾನ (ಜಯಪುರ), ಸಿಕ್ಕಿಮ್ (ಗ್ಯಾಂಗ್‍ಟಾಕ್) ತ್ರಿಪುರಾ (ಅಗರ್ತಲಾ), ಉತ್ತರಪ್ರದೇಶ (ಲಖನೌ), ಪಶ್ಚಿಮ ಬಂಗಾಳ (ಕಲ್ಕತ್ತ), ಜಮ್ಮು ಮತ್ತು ಕಾಶ್ಮೀರ (ಶ್ರೀನಗರ), ಕೇಂದ್ರಶಾಸಿತ ಪ್ರದೇಶಗಳಿವು : ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು (ಪೋರ್ಟ್‍ಬ್ಲೇರ್), ಅರುಣಾಚಲ ಪ್ರದೇಶ (ಇಟಾನಗರ). ದಾದ್ರಾ ಮತ್ತು ನಗರ ಹವೇಲಿ (ಸಿಲ್ಟಾಸ್). ಗೋವ, ದಮನ್ ಮತ್ತು ದಿಯೂ (ಪಣಜಿ), ಲಕ್ಷದ್ವೀಪ (ಕವರಾಟಿ), ಮಿಜೋರಾಮ್ (ಐಜಾವಲ್), ಪುದುಚೇರಿ (ಪುದುಚೇರಿ), ದೆಹಲಿ ಮತ್ತು ಚಂಡೀಗಢ

ಸಾಂಸ್ಕøತಿಕ ಸಂಸ್ಥೆಗಳು: ಲಲಿತಕಲಾ ಅಕಾಡೆಮಿ 1954ರಲ್ಲಿ ಸ್ಥಾಪಿತವಾಯಿತು. ಇದು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುತ್ತದೆ. 1953ರಲ್ಲಿ ಆರಂಭವಾದ ಸಂಗೀತ ನಾಟಕ ಅಕಾಡೆಮಿಯ ಗುರಿ ಸಂಶೋಧನ ಹಾಗೂ ರಂಗಭೂಮಿಗೆ ಪ್ರೋತ್ಸಾಹ, ತರಬೇತಿ, ಸಾಹಿತ್ಯ ಅಕಾಡೆಮಿ ಭಾರತೀಯ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತದೆ. ನಾನಾ ಭಾರತೀಯ ಭಾಷೆಗಳ ಕೃತಿಗಳಿಗೆ ಬಹುಮಾನ ನೀಡುತ್ತದೆ. ಇದು 1954ರಲ್ಲಿ ಸ್ಥಾಪಿತವಾಯಿತು. ನ್ಯಾಷನಲ್ ಬುಕ್ ಟ್ರಸ್ಟ್ 1957ರಲ್ಲಿ ಆರಂಭವಾಯಿತು. ಸಾಹಿತ್ಯದ ಸೃಷ್ಟಿಗೆ ಪ್ರೋತ್ಸಾಹ ಹಾಗೂ ಅಗ್ಗದ ಬೆಲೆಯಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ಇದರ ಮುಖ್ಯ ಗುರಿಗಳು, ಅನ್ಯದೇಶಗಳೊಂದಿಗೆ ಸಾಂಸ್ಕøತಿಕ ಸಂಬಂಧ ಬೆಳೆಸಲು ಭಾರತೀಯ ಕೌನ್ಸಿಲ್ ಇದೆ. ಅಖಿಲಭಾರತ ರೇಡಿಯೊ (ಆಕಾಶವಾಣಿ) ಹಾಗೂ ದೂರದರ್ಶನ ಕೇಂದ್ರಗಳು ದೇಶದ ನಾನಾ ಸ್ಥಳಗಳಲ್ಲಿವೆ. ಇವು ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿವೆ. ಜ್ಞಾನಪೀಠ ಪ್ರಶಸ್ತಿ ಉತ್ತಮ ಕೃತಿಗಳಿಗೆ ಬಹುಮಾನ ನೀಡುತ್ತದೆ. ಇದೊಂದು ಖಾಸಗಿ ಪ್ರಯತ್ನ.

ಭಾರತದಲ್ಲಿ 10,000ಕ್ಕೂ ಹೆಚ್ಚು ದಿನ, ವಾರ, ದ್ವಿವಾರ, ತ್ರಿವಾರ, ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಪತ್ರಿಕೆಗಳು ಪ್ರಕಟವಾಗುತ್ತಿವೆ. ಅತಿ ಹೆಚ್ಚಿನ ವಾರ್ತಾಪತ್ರಿಕೆಗಳು ಹಿಂದಿಯವು. ಅನಂತರ ಬರುವವು ಉರ್ದು ಹಾಗೂ ಇಂಗ್ಲಿಷ್ ಪತ್ರಿಕೆಗಳು. ಭಾರತೀಯ ಚಲನಚಿತ್ರ ಕೈಗಾರಿಕೆ ಪ್ರಪಂಚದಲ್ಲೇ ಹೆಚ್ಚು ಚಿತ್ರಗಳನ್ನು ನಿರ್ಮಿಸುತ್ತಿದೆ. ಈ ವಿಚಾರದಲ್ಲಿ ಜಪಾನ್ ಅಮೆರಿಕಗಳಿಗೆ ಹೆಗಲೆಣೆಯಾಗಿದೆ. ಇದು ಭಾರತದ ಎಂಟನೆಯ ದೊಡ್ಡ ಕೈಗಾರಿಕೆ. ಭಾರತದ ಚಿತ್ರ ಪರಂಪರೆಯ ಪಾಲನೆ ರಕ್ಷಣೆಗಾಗಿ ರಾಷ್ಟ್ರೀಯ ಚಲನ ಚಿತ್ರ ಆರ್ಕೈವ್ 1954ರಲ್ಲಿ ಸ್ಥಾಪಿತವಾಯಿತು.

ನಾಣ್ಯ: ಭಾರತದ ನಾಣ್ಯ ರೂಪಾಯಿ. ಇದನ್ನು ನೂರು ಪೈಸೆಗಳಿಗೆ ವಿಭಾಗ ಮಾಡಲಾಗಿದೆ.       
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ